ಜಿಲ್ಲೆ

ಗಣಿಗಾರಿಕೆಯಿಂದ ಮನೆಗಳಲ್ಲಿ ಬಿರುಕು - ಅಳಿಕೆ ಗ್ರಾಮದ ಬರೆಂಗೋಡಿಯಲ್ಲಿ ಘಟನೆ - ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ

Mangaluru - Nishantha Narayana

ವಿಟ್ಲ: ಅಳಿಕೆ ಗ್ರಾಮದ ಬರೆಂಗೋಡಿ ಕೋಡಿಜಾಲು ಭಾಗದಲ್ಲಿ ಕಪ್ಪುಕಲ್ಲು ಗಣಿಗಾರಿಕೆಗೆ ಭಾರಿ ಪ್ರಮಾಣದ ಸೋಟ ಬಳಕೆ ಮಾಡುತ್ತಿರುವುದರಿಂದ ಸ್ಥಳೀಯ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಜೀವಭಯದಿಂದ ದಿನ ಕಳೆಯುವಂತಾಗಿದೆ. ಶೀಘ್ರ ಪರಿಶೀಲಿಸಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಽಕಾರಿಗೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದಾರೆ.

ಗಣಿಗಾರಿಕೆಗೆ ಪರವಾನಗಿ ನೀಡುವ ಸಾರ್ವಜನಿಕರಿಗೆ ಮಾಹಿತಿ ನೀಡದೆ, ಗೌಪ್ಯವಾಗಿ ಕಾರ್ಯ ನಡೆಸಲಾಗಿದೆ. ಕಲ್ಲಿನ ಗಣಿಗಾರಿಕೆಗೆ ಪ್ರಾರಂಭದಲ್ಲೇ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದರೂ ಕಾಂಗ್ರೆಸ್- ಬಿಜೆಪಿಗರ ಹೊಂದಾಣಿಕೆ ರಾಜಕೀಯ ಹಾಗೂ ಕೇರಳದ ದುಡ್ಡಿನ ಪ್ರಭಾವದಿಂದ ಬೆದರಿಕೆ ಧಮ್ಕಿಯ ಮೂಲಕ ಸ್ಥಳೀಯರ ಬಾಯಿ ಮುಚ್ಚಿಸಲಾಗುತ್ತಿತ್ತು ಎಂದು ದೂರಿನಲ್ಲಿ ಹೇಳಿದ್ದಾರೆ.

ರಾತ್ರಿ ಪಾಳಿಯಲ್ಲೂ ಗಣಿಗಾರಿಕೆ ನಡೆಯುತ್ತಿದ್ದು, ಕಲ್ಲು, ಧೂಳು ಮಿಶ್ರಿತ ಕಲ್ಲಿನ ಹುಡಿ ತುಂಬಿಕೊಂಡು ೧೮ ಚಕ್ರಗಳ ವಾಹನಗಳ ಓಡಾಟ ನಡೆಯುತ್ತಿದೆ. ಲೋಕೋಪಯೋಗಿ ರಸ್ತೆಗಳಲ್ಲಿ ನಿರ್ಬಂಧವಿದ್ದರೂ ಅವ್ಯಾಹತವಾಗಿ ಚಲಿಸುತ್ತಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಆರ್‌ಟಿಒ ಅಽಕಾರಿಗಳಿಗೆ ಹಾಗೂ ಸ್ಥಳೀಯ ಪೋಲಿಸ್ ಅಽಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಳೀಯ ಅಧ್ಯಾಪಕ ಸಂಕಪ್ಪ ಗೌಡ, ಬಾಲಕೃಷ್ಣ, ಪ್ರಸನ್ನ, ಮೊದೀನ್, ಅಶ್ರಫ್, ರಾಘವ ಮತ್ತಿತರರು ಉಪಸ್ಥಿತರಿದ್ದರು.