ಜಿಲ್ಲೆ

ಒಳ್ಳೆಯ ಗುಣ ಧರಿಸುವುದು ನಿಜವಾದ ಧರ್ಮ - ವಿಚಾರ ಸಂಕಿರಣದಲ್ಲಿ ಚಿಂತಕ ಎಂ.ಜಿ.ಹೆಗ್ಡೆ ಅನಿಸಿಕೆ

Mangaluru - Nishantha Narayana

ಪುತ್ತೂರು: ಒಳ್ಳೆಯ ಗುಣಗಳನ್ನು ಧರಿಸುವುದು ನಿಜವಾದ ಧರ್ಮ. ಆರಾಧನೆಗಳಿಂದ ಕಚ್ಚಾಟ ಪ್ರಾರಂಭವಾಗಿದೆ ಹೊರತು ಆಧ್ಯಾತ್ಮಿಕತೆಯಿಂದ ಜಗಳಗಳಾಗುತ್ತಿಲ್ಲ. ಪ್ರತಿಯೊಬ್ಬನೂ ಧರ್ಮದ ವೇದಾಂತ ಅರಿಯುವ ಕಾರ್ಯವಾಗಬೇಕು. ನಂಬಿಕೆ ಹಾಗೂ ಮೂಢನಂಬಿಕೆಯನ್ನು ಸರಿಯಾಗಿ ತಿಳಿಯಬೇಕು ಎಂದು ಚಿಂತಕ ಎಂ.ಜಿ.ಹೆಗ್ಡೆ ಹೇಳಿದರು.

ಪುತ್ತೂರಿನಲ್ಲಿ ಸೋಮವಾರ ಮಾನವ ಬಂಧುತ್ವ ವೇದಿಕೆಯಿಂದ ಧರ್ಮ - ಜೀವನ ಧರ್ಮ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಧಾರ್ಮಿಕ ಕೇಂದ್ರಗಳು ಸಾಮೂಹಿಕವಾಗಿ ಸೇರುವುದಕ್ಕೆ ಪ್ರಾರಂಭವಾದ ವಿಚಾರ. ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಧರ್ಮವಿದೆ. ಜೀವನ ಧರ್ಮ ಉಲ್ಲಂಘಿಸಿದ ಮೇಲೆ ಯಾವ ಧರ್ಮವೂ ಸ್ವೀಕರಿಸುವುದಿಲ್ಲ. ಧರ್ಮ ಪಂಡಿತರು ಅನ್ಯಾಯ, ಅನಾಚಾರ, ಭ್ರಷ್ಟಾಚಾರ ಮಾಡದಂತೆ ಸೂಚಿಸುವ ಕಾರ್ಯ ಮಾಡುತ್ತಿಲ್ಲ. ಧರ್ಮ ಬಗ್ಗೆ ಮಾತನಾಡುವುದಕ್ಕೇ ಭಯ ಪಡುವ ಸ್ಥಿತಿಗೆ ಸಮಾಜ ಬಂದಿದೆ ಎಂದರು.

ಸಹ ಸಂಚಾಲಕ ಮೌರಿಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದರು. ಮಾನವ ಬಂಧುತ್ವ ವೇದಿಕೆಯ ಕರಾವಳಿ ವಿಭಾಗೀಯ ಸಂಚಾಲಕ ಸತೀಶ್‌ಕುಮಾರ್ ಕೆ.ಎಸ್., ಜಿಲ್ಲಾ ಪ್ರಧಾನ ಸಂಚಾಲಕ ಜಯರಾಮ ಪೂಜಾರಿ ಉಪಸ್ಥಿತರಿದ್ದರು. ತಾಲೂಕು ಸಂಚಾಲಕ ರಾಮ ಪಾಂಬಾರು ಸ್ವಾಗತಿಸಿದರು. ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಪ್ರಸ್ತಾವನೆಗೈದರು. ರಾಮ ಮೇನಾಲ ವಂದಿಸಿದರು.