ಜಿಲ್ಲೆ

VIDEO| ಮಾನಸಿ ಸುಧೀರ್​ ಅಭಿನಯದಲ್ಲಿ ಅರಳಿದ ಅಕ್ಷರ ಗಣಪ: ಮತ್ತೆ ಮತ್ತೆ ನೋಡ್ಬೇಕೆನಿಸುವ ವಿಡಿಯೋ!

ಉಡುಪಿ: ತಮ್ಮ ನಾಟಕೀಯ ಶೈಲಿಯ ಹಾಡುಗಳ ಮೂಲಕ ಫೇಸ್​ಬುಕ್​ನಲ್ಲಿ ಹೊಸ ಹವಾ ಸೃಷ್ಟಿಸಿರುವ ಕಲಾವಿದೆ ಮಾನಸಿ ಸುಧೀರ್ ಮತ್ತೊಮ್ಮೆ ಸದ್ದು ಮಾಡಿದ್ದಾರೆ.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಅದ್ಬುತ ಹಾಡು ರಿಲೀಸ್ ಆಗಿದ್ದು, ಕಥನ ಶೈಲಿಯಲ್ಲಿರುವ ಗಣೇಶನ ಹಾಡು ಈಗ ಸಖತ್ ವೈರಲ್ ಆಗಿದೆ. ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳನ್ನು ಇಟ್ಟುಕೊಂಡು ಗಣೇಶ ಹಬ್ಬದ ಸಂಭ್ರಮವನ್ನು ವಿವರಿಸಲಾಗಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಮನಸ್ಸನ್ನೂ ಗೆದ್ದಿದೆ. ದಿವಂಗತ ಮುಂಡಾಜೆ ರಾಮಚಂದ್ರ ಭಟ್ ಅವರು ಆರೇಳು ದಶಕಗಳ ಹಿಂದೆ ಬರೆದ ಈ ಶಿಶುಗೀತೆಗೆ ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮರುಜೀವ ಬಂದಿದೆ.

ಹಬ್ಬದ ಖುಷಿಯ ಜತೆಗೆ ಕನ್ನಡ ಪ್ರೀತಿಯನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳುವ ಈ ಹಾಡು ಅನೇಕರ ಮೆಚ್ಚುಗೆಗೂ ಪಾತ್ರವಾಗಿದೆ. ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿರುವುದರಿಂದ, ಈ ರೀತಿಯಲ್ಲೂ ಪಾಠ ಮಾಡಿ ಮಕ್ಕಳ ಮನ ಗೆಲ್ಲಬಹುದು ಅಂತ ಈ ವಿಡಿಯೋ ಸಾರಿ ಹೇಳುತ್ತಿದೆ. (ದಿಗ್ವಿಜಯ ನ್ಯೂಸ್​)