ಮಂಜುನಾಥ ತಿಮ್ಮಯ್ಯ ಮೈಸೂರು
ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಮಾನಸಗಂಗೋತ್ರಿ ಇದೀಗ ಹಸಿರಿನ ಸಿರಿಯಿಂದ ನಳನಳಿಸುತ್ತಿದೆ. ವಿದ್ಯಾರ್ಥಿ ಸಮೂಹದ ಕಣ್ಮನ ಸೆಳೆಯುತ್ತಿದೆ….!
ಬರಗಾಲ ಕಣ್ಮರೆಯಾಗಿ ಪ್ರಸಕ್ತ ಸಾಲಿನ ಮುಂಗಾರು ಮಳೆಯ ಸಿಂಚನ ಹದವಾಗಿ ಸುರಿದಿದೆ. ಪರಿಣಾಮ 739 ಎಕರೆ ವಿಸ್ತಾರವಾದ ಮಾನಸಗಂಗೋತ್ರಿಯು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ವಿದ್ಯಾರ್ಥಿಗಳಿಗೆ ಹಿತಾನುಭವ, ಆಹ್ಲಾದಕರ ವಾತಾವರಣವನ್ನು ಉಣಬಡಿಸುತ್ತಿದೆ.
ಕಳೆದ ಏಪ್ರಿಲ್‌ನಿಂದ ಮೇಲಿಂದ ಮೇಲೆ ವರ್ಷಧಾರೆಯಾಗುತ್ತಿದೆ. ಜೂನ್‌ನಲ್ಲಿ ಉತ್ತಮವಾಗಿ ಮಳೆಯಾಗಿದೆ. ಇಲ್ಲಿಯ ಒಣಗಿದ್ದ ಸಸ್ಯರಾಶಿಗಳಿಗೆ ಜೀವದ್ರವ್ಯ ಸಿಕ್ಕಂತಾಗಿ ಮತ್ತೆ ಚಿರುಗೊಡೆದಿವೆ. ಎಲ್ಲೆಡೆ ಭೂತಾಯಿ ಹಸಿರು ಸೀರೆಯನ್ನು ಹೊದ್ದುಕೊಂಡು ಕಂಗೊಳಿಸುತ್ತಿದ್ದು, ಈ ಸೊಬಗು ನೋಡುವುದೇ ಒಂದು ರೀತಿ ಚೆಂದದ ಅನುಭವ…!
ರಾಷ್ಟ್ರಕವಿ ಕುವೆಂಪು ಅವರಿಂದ ನಾಮಾಂಕಿತಗೊಂಡಿರುವ ‘ಮಾನಸಗಂಗೋತ್ರಿ’ ನಿಜಕ್ಕೂ ಮನಸ್ಸಿನ ನಿರಂತರ ವಸಂತದಂತೆ ಭಾಸವಾಗುತ್ತಿದೆ. ಇದಕ್ಕೆ 261 ಎಕರೆ ವ್ಯಾಸದ ಕುಕ್ಕರಹಳ್ಳಿ ಕೆರೆ ರಮಣೀಯತೆಯೂ ಇನ್ನಷ್ಟು ಮೆರುಗು ತಂದುಕೊಟ್ಟಿದೆ.
ಗಂಗೋತ್ರಿ ವಿವಿಧ ಹೂಗಳಿಂದ ತುಂಬಿದ ಉದ್ಯಾನಗಳು, ಲಾನ್‌ಗಳಿಂದ ಕೂಡಿದೆ. ಪ್ರಪಂಚದ ಇತರ ಉತ್ಕೃಷ್ಟ ವಿಶ್ವವಿದ್ಯಾಲಯಗಳಲ್ಲಿರುವಂತೆ ಆಹ್ಲಾದಕರ ಹವಾಮಾನ, ಶಬ್ದರಹಿತ ಪರಿಸರ ದೊರೆಯುತ್ತದೆ. ಸೌರಶಕ್ತಿಯ ಬೀದಿದೀಪಗಳನ್ನು ಅಳವಡಿಸಿರುವ ಕಾರಣ ಇಡೀ ಆವರಣ ಸೌರಮಯವಾಗಿದೆ.
ಇಲ್ಲಿರುವ 85 ಸ್ನಾತಕೋತ್ತರ ವಿಭಾಗಗಳಲ್ಲಿ 150ಕ್ಕೂ ಹೆಚ್ಚು ಸ್ನಾತಕೋತ್ತರ ವಿಷಯಗಳನ್ನು ಬೋಧಿಸಲಾಗುತ್ತಿದೆ. ಸ್ನಾತಕ ಪದವಿ, ಸ್ನಾತಕೋತ್ತರ ಪದವಿ, ಎಂ.ಫಿಲ್, ಪಿಎಚ್.ಡಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 39 ಮಾನ್ಯತೆಯುಳ್ಳ ಸಂಶೋಧನಾ ಕೇಂದ್ರಗಳು, 8 ತರಬೇತಿ ಕೇಂದ್ರಗಳು, 15 ಪೀಠಗಳಿವೆ. ಈ ಕಟ್ಟಡಗಳ ಸುತ್ತಲಿರುವ ಹಸಿರಿನ ಚಪ್ಪರ ನೋಡುವುದೇ ಕಣ್ಣಿಗೆ ಹಬ್ಬ.
ಅಂದಾಜು ಒಂದು ಲಕ್ಷ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಜತೆಗೆ, 50 ದೇಶಗಳಿಂದ ಬಹುಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳು ವಿವಿಯಲ್ಲಿ ವಿವಿಧ ವಿಷಯಗಳನ್ನು ಕಲಿಯುತ್ತಿದ್ದಾರೆ. ಇವರಿಗೆಲ್ಲ ಗಂಗೋತ್ರಿ ಫೇವರೆಟ್ ಆಗಿದೆ.
ಚಾಮುಂಡಿಬೆಟ್ಟ ಹೊರತುಪಡಿಸಿದರೆ ಹಸಿರನ್ನು ಹೊದ್ದು ಮೈಸೂರಿಗೆ ಉಸಿರು ನೀಡುತ್ತಿರುವ ತಾಣವೇ ಮಾನಸಗಂಗೋತ್ರಿ. 60ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಆಗಿ ರೂಪುಗೊಂಡಾಗಿನಿಂದಲೂ ‘ಹಸಿರು’ ಕೇಂದ್ರಬಿಂದು ಎನಿಸಿದೆ. ಆದಾಗ್ಯೂ, ಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಿಗೂ ಇದು ಮೈವೊಡ್ಡಿಕೊಂಡಿದೆ.
ಕಳೆದ ಒಂದು ದಶಕಗಳಿಂದ ಹಸಿರಿಗೆ ಧಕ್ಕೆ ಉಂಟು ಮಾಡುವ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಹಸಿರು ಉಳಿಸುವುದಕ್ಕಿಂತ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಕಾಳಜಿ ತೋರಿಸುತ್ತಿರುವುದರಿಂದಲೇ ಮಾನಸಗಂಗೋತ್ರಿ ಮೊದಲಿನಂತೆ ಇಲ್ಲ ಎಂದು ಹಳೇ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರೂ, ತಕ್ಕ ಮಟ್ಟಿಗೆ ಇನ್ನೂ ಹಸಿರು ಉಳಿದುಕೊಂಡಿದೆಯಲ್ವೇ ಎಂಬ ಸಮಾಧಾನವನ್ನೂ ವ್ಯಕ್ತಪಡಿಸುತ್ತಾರೆ.
ಶೈಕ್ಷಣಿಕ, ಸಂಶೋಧನಾ ಸಂಸ್ಥೆ, ಯಾವುದೇ ವಿಶ್ವವಿದ್ಯಾಲಯವನ್ನು ಮೈಸೂರಿನಲ್ಲಿ ಸ್ಥಾಪಿಸುವ ಪ್ರಸ್ತಾವ ಬಂದರೆ ಆಡಳಿತವರ್ಗದವರಿಗೆ ಕಣ್ಣು ಬೀಳುವುದು ಗಂಗೋತ್ರಿಯ ವಿಸ್ತಾರವಾದ ಭೂಮಿ ಮೇಲೆಯೇ. ಹೀಗಾಗಿಯೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್), ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಕಲಾಮಂದಿರ, ರಂಗಾಯಣ, ಕಾಫಿ ಬೋರ್ಡ್‌ಗಳಿಗೆ ಇಲ್ಲಿಯೇ ಜಾಗ ಕೊಡಲಾಗಿದೆ. ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ ಸ್ಥಾಪನೆಗೆ ಇಲ್ಲಿಯೇ 5 ಎಕರೆ ಜಾಗವನ್ನೂ ಗುರುತಿಸಲಾಗಿತ್ತು. ವಿವಿಧ ಸಂಸ್ಥೆಗಳಿಗೆ ಜಾಗ ಕೊಟ್ಟಿದ್ದರಿಂದ ಗಂಗೋತ್ರಿ ಹೋಳಾಗಿದೆ, ಇನ್ನಷ್ಟು ಕಿರಿದಾಗುತ್ತಿದೆ.
ಕಳೆದ 10-15 ವರ್ಷಗಳಿಂದ ಈಚೆಗೆ ಕಾಂಕ್ರೀಟ್ ಕಟ್ಟಡಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತಿವೆ. ವಿಜ್ಞಾನಭವನ, ಮೌಲ್ಯಭವನ, ಬಿಎಂಶ್ರೀ ಸಭಾಂಗಣ, ಕಾನೂನು ಶಾಲೆ, ವಾಸ್ತುಶಿಲ್ಪ ಕಾಲೇಜು, ಕಳೆದ ಎರಡು ವರ್ಷದಲ್ಲಿ ಪತ್ರಿಕೋದ್ಯಮ ಅಧ್ಯಯನ ವಿಭಾಗ, ಶ್ರೀಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಔಷಧ ಕಾಲೇಜು ಕಟ್ಟಡಗಳು ಸೇರಿದಂತೆ ಹಲವು ಹೊಸ ಕಟ್ಟಡಗಳು ಮೇಲೆದ್ದಿವೆ. ಹಳೇ ಕಟ್ಟಡಗಳು ನವೀಕೃತಗೊಂಡಿವೆ. ಗಾಂಧಿಭವನ ಆವರಣದಲ್ಲಿ ಸಾಬರಮತಿ ಆಶ್ರಮದ ಮಾದರಿ ಕಟ್ಟಡ, ಗಾಂಧಿ, ಅಂಬೇಡ್ಕರ್ ಪ್ರತಿಮೆಗಳು ಗಂಗೋತ್ರಿಗೆ ಮೆರುಗು ನೀಡಿವೆ.
ದಶಕದ ಹಿಂದೆ ಯಾರೂ ಬೇಕಾದರೂ ಕ್ಯಾಂಪಸ್‌ಗೆ ಪ್ರವೇಶಿಸಬಹುದಿತ್ತು. ಆದರೆ ಇದೀಗ ಕಾಂಪೌಂಡ್ ನಿರ್ಮಾಣವಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಕ್ಯಾಂಪಸ್‌ನ ಜೀವವೈವಿಧ್ಯಕ್ಕೆ ರಕ್ಷಣೆ ಸಿಕ್ಕಿದೆ. ಪ್ರವೇಶದ್ವಾರ ಹೊಸ ರೂಪಕೊಟ್ಟಿದ್ದು, ಕುವೆಂಪು ಪ್ರತಿಮೆ ಕಣ್ಮನ ಸೆಳೆಯುತ್ತಿದೆ.
ರಸ್ತೆ, ವಾಕಿಂಗ್ ಪಾಥ್, ಪಾರಂಪರಿಕ ವಿದ್ಯುತ್ ದೀಪಗಳು, ಗಡಿಯಾರ ಗೋಪುರ ಗಂಗೋತ್ರಿಯ ಸೌಂದರ್ಯದೊಂದಿಗೆ ವಿಶ್ವವಿದ್ಯಾಲಯದ ಚೆಲುವನ್ನೂ ವೃದ್ಧಿಸಿವೆ. ಗಂಗೋತ್ರಿಯಲ್ಲಿರುವ ಕ್ರಿಕೆಟ್ ಮೈದಾನದಲ್ಲಿ ದೇಸಿ ರಣಜಿ ಕ್ರಿಕೆಟ್ ಪಂದ್ಯಗಳಿಗೆ ವೇದಿಕೆಯಾಗಿದೆ. ಇಲ್ಲಿರುವ 7 ಪುರುಷ ಮತ್ತು 4 ಮಹಿಳಾ ವಿದ್ಯಾರ್ಥಿನಿಲಯಗಳು ಅನ್ಯ ಊರಿನ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿವೆ.
ಮೈಸೂರು ವಿಶ್ವವಿದ್ಯಾಲಯವು 1916ರ ಜುಲೈ 27ರಂದು ಸ್ಥಾಪನೆಯಾಯಿತು. ಇದು ಭಾರತ ದೇಶದ 6ನೇ ಮತ್ತು ಕರ್ನಾಟಕ ರಾಜ್ಯದಲ್ಲಿ ಸ್ಥಾಪನೆಗೊಂಡ ಮೊದಲ ವಿಶ್ವವಿದ್ಯಾಲಯ. ಹಾಗೆಯೇ ಬ್ರಿಟಿಷರ ಭಾರತದ ಸರಹದ್ದಿನ ಹೊರಗೆ ಸ್ಥಾಪಿತವಾದ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಹಿರಿಮೆ ಇದೆ. ದೂರದೃಷ್ಟಿಯುಳ್ಳ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಯತ್ನದ ಫಲ ಇದು.
ಮೈಸೂರು ವಿಶ್ವವಿದ್ಯಾಲಯವು ಕ್ರಾಫರ್ಡ್ ಭವನ, ಮಹಾರಾಜ ಕಾಲೇಜು, ಯುವರಾಜ ಕಾಲೇಜಿಗೆ ಸೀಮಿತವಾಗಿತ್ತು. 1959ರಲ್ಲಿ ಆಗಿನ ಕುಲಪತಿ ಕುವೆಂಪು ಅವರು 10 ಲಕ್ಷ ರೂ.ಗೆ ಜಯಲಕ್ಷ್ಮೀ ವಿಲಾಸ ಅರಮನೆ ಸಹಿತ ಸುತ್ತಲಿನ 300 ಎಕರೆ ವಿಸ್ತೀರ್ಣದ ಭೂಮಿಯನ್ನು ರಾಜವಂಶಸ್ಥರಿಂದ ಖರೀದಿಸಿದರು. ಸ್ನಾತಕೋತ್ತರ ವಿಭಾಗಗಳನ್ನು ಸ್ಥಳಾಂತರಿಸಿ, ಆವರಣವನ್ನು ಮಾನಸಗಂಗೋತ್ರಿ ಎಂದು ಕರೆದರು. ಇಷ್ಟು ವಿಸ್ತಾರವಾದ ಜಾಗ ಏಕೆ ಬೇಕೆಂದು ಅನೇಕರು ಕುಹಕದ ಮಾತುಗಳೊಂದಿಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಆದರೀಗ ಅದರ ಮಹತ್ವ, ಅವರ ದೂರದೃಷ್ಟಿ ಈಗ ಅರ್ಥವಾಗುತ್ತಿದೆ.
ಮಾನಸಗಂಗೊತ್ರಿಯಲ್ಲಿ ಹಸಿರು ಸದಾ ಇರುವಂತೆ ನಿರ್ವಹಣೆ ಮಾಡಲಾಗುತ್ತಿದೆ. ಪೈಪ್‌ಲೈನ್ ಮೂಲಕ ಹನಿ ನೀರಾವರಿ ರೀತಿಯಲ್ಲಿ ಗಿಡಗಳಿಗೆ ನೀರು ಕೊಡಲಾಗುತ್ತಿದೆ. ಉಳಿದ ಕಡೆ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರು ಹಾಯಿಸಲಾಗುತ್ತಿದೆ. ಜೂನ್ ಮೊದಲ ವಾರದಲ್ಲಿ 700 ಗಿಡಗಳನ್ನು ನೆಡಲಾಗಿದೆ. ಗಂಗೋತ್ರಿ ಆವರಣದಲ್ಲೇ 10 ಸಾವಿರ ಗಿಡಮರಗಳಿವೆ. ಮೈಸೂರು ವಿವಿ ವ್ಯಾಪ್ತಿಯಲ್ಲಿ 25 ಸಾವಿರ ಮರಗಳಿವೆ.ಎಸ್.ಕೆ.ಮುಜಾವರ್ಸಹಾಯಕ ನಿರ್ದೇಶಕ,ತೋಟಗಾರಿಕೆ ವಿಭಾಗ, ಮೈವಿವಿ
ಗಂಗೋತ್ರಿಯಲ್ಲಿ ಕಲಿಯುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ವಿಶಾಲವಾದ ಕ್ಯಾಂಪಸ್‌ನಲ್ಲಿ ಹಸಿರಿನ ಸಿರಿ, ಗಿಡಮರಗಳ ಮೋಹಕತೆ, ಪಕ್ಷಿಗಳ ಕಲರವ, ಹಿತವಾದ ತಂಪು ವಾತಾವರಣ ಕಲಿಕೆಗೆ ಇನ್ನಷ್ಟು ಪ್ರೇರಣೆ ನೀಡುತ್ತದೆ.ಮದನ್, ಮೈವಿವಿ ವಿದ್ಯಾರ್ಥಿ