ದೇವದುರ್ಗ ತಾಲೂಕಿನ ಮಾನಸಗಲ್ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿರುವುದು. 
ಜಿಲ್ಲೆ

ಮಾನಸಗಲ್ ಶ್ರೀ ಲಕ್ಷ್ಮೀ ರಂಗನಾಥ ಜಾತ್ರೆ ಇಂದು

ದೇವದುರ್ಗ: ಎರಡನೇ ತಿರುಪತಿ ಖ್ಯಾತಿಯ ತಾಲೂಕಿನ ಮಾನಸಗಲ್ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಜಾತ್ರೋತ್ಸವ ಹಾಗೂ ಬ್ರಹ್ಮ ರಥೋತ್ಸವ ಮೇ 12ರಂದು ಜರುಗಲಿದೆ.

ಜಾತ್ರೆ ನಿಮಿತ್ತ ಭಾನುವಾರ ಬೆಳಗ್ಗೆ ಶ್ರೀ ಲಕ್ಷ್ಮೀ ರಂಗನಾಥ ದೇವರಿಗೆ ವಿಶೇಷ ಪೂಜೆ, ಸಂಜೆ ಉಚ್ಚಾಯ ಮಹೋತ್ಸವ ಜರುಗಿತು. ಮೇ 12ರಂದು ಬೆಳಗ್ಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಲಿದೆ. ಇರಬಗೇರಾ ಭಕ್ತರು 2-3 ಕಿಮೀವರೆಗೆ ದೀರ್ಘದಂಡ ನಮಸ್ಕಾರ ಸೇವೆ ಸಲ್ಲಿಸಲಿದ್ದಾರೆ. ನಂತರ ಇರಬಗೇರಾ, ಹೇಮನೂರು, ಕೋತಿಗುಡ್ಡ, ತೆಗ್ಗಿಹಾಳ ಸೇರಿ ವಿವಿಧ ಗ್ರಾಮದ ಭಕ್ತರು ಪಲ್ಲಕ್ಕಿ ಉತ್ಸವ ಹಾಗೂ ನೀರಿನ ಆಟ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ವೈಶಾಖ ಶುದ್ಧ ಷಷ್ಠಿ ದಿನ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ವಿವಾಹಕ್ಕೆ ಕಂಕಣ ಕಟ್ಟಲಾಗುವುದು. ಒಂಬತ್ತು ದಿನಗಳ ನಂತರ ಬುದ್ಧ ಪೂರ್ಣಿಮೆ ದಿನದಂದು ಬ್ರಹ್ಮರಥೋತ್ಸವ ಜರುಗಲಿದೆ. ಕಂಕಣ ಕಟ್ಟಿದ ಮೇಲೆ ಮಾಲಾಧಾರಿಗಳು ಗೋವಿಂದ ನಾಮ ಜಪಿಸುತ್ತಾ 9 ದಿನಗಳ ಕಾಲ ನಿರಂತರವಾಗಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಸಂಜೆ 5ಕ್ಕೆ ಪಲ್ಲಕ್ಕಿಯಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಮೂಲವಿಗ್ರಹ ಮೆರವಣಿಗೆ, 6ಗಂಟೆಗೆ ಬ್ರಹ್ಮ ರಥೋತ್ಸವ ಜರುಗಲಿದೆ. ನಂತರ ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಅರ್ಚಕ ನಾಗರಾಜ ಪೂಜಾರಿ ತಿಳಿಸಿದ್ದಾರೆ.