ಪುರಭವನದ ಎದುರು ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.
ಮಂಗಳೂರು : ನಗರದ ಕುದ್ಮುಲ್ ರಂಗರಾವ್ ಪುರಭವನದ ಎದುರು ಫುಟ್ ಪಾತ್ ನಲ್ಲಿ ವ್ಯಾಪಾರನಿರತ ಬೀದಿಬದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ಸ್ಥಳದಲ್ಲಿ ಉಪಸ್ಥಿತರಿದ್ದು, ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಮಾರ್ಗದರ್ಶನ ನೀಡಿದರು. ಈ ಹಂತದಲ್ಲಿ ಕಾರ್ಯಾಚರಣೆಯನ್ನು ಪ್ರಶ್ನಿಸಿದ ಬೀದಿಬದಿ ವ್ಯಾಪಾರಿಗಳನ್ನು ಹಾಗೂ ಸಿಐಟಿಯು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಕಾರ್ಯಾಚರಣೆಗೆ ಮೊದಲು ಮನಪಾ ಆಯುಕ್ತ ರವಿಚಂದ್ರ ನಾಯಕ್, ಬೀದಿ ವ್ಯಾಪಾರಿಗಳ ಬಳಿ ತೆರಳಿ ಇಲ್ಲಿ ಕಾನೂನು ಪ್ರಕಾರ ವ್ಯಾಪಾರ ಮಾಡುವಂತಿಲ್ಲ. ಆದ್ದರಿಂದ ಎಲ್ಲರೂ ತಮ್ಮ ಸಾಮಗ್ರಿಗಳನ್ನು ತೆರವು ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಈ ಹಂತದಲ್ಲಿ ವ್ಯಾಪಾರಿಗಳು, ನಾವು ನಲುವತ್ತು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ನಿಯತ್ತಿನಿಂದ ದುಡಿಯುತ್ತಿದ್ದೇವೆ, ಕಳ್ಳತನ ಮಾಡುತ್ತಿಲ್ಲ ಸಾರ್. ನಮಗೆ ನೀವು ಬದಲಿ ವ್ಯವಸ್ಥ ಮಾಡಿಕೊಡಿ ಎಂದು ಮನವಿ ಮಾಡಿದರು. ನಿಮಗೆ ಬದಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಆಯುಕ್ತರು ಹೇಳಿದಾಗ, ಹಾಗೆ ಹೇಳಬೇಡಿ ಸಾರ್. ನಮಗೆ ನ್ಯಾಯ ಕೊಡಿ ಎಂದು ಮನವಿ ಮಾಡಿದಾಗ ಆಗುವುದಿಲ್ಲ. ಯಾರಾದರೂ ನಿಯಮ ಉಲ್ಲಂಘಿಸಿ ಮುಂದುವರಿದರೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಯುಕ್ತರು ತಮ್ಮ ಮನವಿಗೆ ಸ್ಪಂದಿಸದೆ ಇದ್ದಾಗ ವ್ಯಾಪಾರಿಗಳು ಸಿಟ್ಟಾದರು. ಮನಪಾದ ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.