ವಿಜಯಪುರ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮನಗೂಳಿಯ ರಾಷ್ಟ್ರೀಕೃತ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ 12 ಜನರನ್ನು ಬಂಧಿಸಿದ್ದಾರೆ.
ಮನಗೂಳಿ ಪಟ್ಟಣದ ಬ್ಯಾಂಕ್‌ನಲ್ಲಿ ಕಳೆದ ಮೇ 23 ರಂದು ಸೇಫರ್ ಲಾಕ್ ಮುರಿದು ಕಳ್ಳತನ ಮಾಡಲಾಗಿತ್ತು. ಘಟನೆಯಲ್ಲಿ ಅಂದಾಜು 53.26 ಕೋಟಿ ರೂಪಾಯಿ ಮೌಲ್ಯದ 58.97 ಕೆಜಿ ಚಿನ್ನಾಭರಣ ಹಾಗೂ ನಗದು ಕಳುವಾಗಿತ್ತು.
ಪ್ರಕರಣ ಬೆನ್ನಟ್ಟಿದ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ 10.75 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿತ್ತು.
ಇದೀಗ ಮತ್ತೆ 12 ಜನರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಐದು ಕಾರುಗಳು, ರೈಲ್ವೆ ಇಲಾಖೆಯ ಟಾಟಾ ಕಂಪನಿಯ ಒಂದು ಲಾರಿ ಹಾಗೂ ಬ್ಯಾಂಕ್‌ನ ಸೇಫ್ ಲಾಕರ್ ತೆರೆಯಲು ಬಳಸಿದ ನಕಲಿ ಕೀಲಿ ಕೈಗಳು, ನಕಲಿ ಕೀಲಿಕೈ ತಯಾರಿಸಲು ಬಳಸಿದ ಸಲಕರಣೆಗಳು, ಹೆಕ್ಸಾ ಬ್ಲೇಡ್‌ಗಳು ಮತ್ತು ಬಂಗಾರ ಕರಗಿಸಲು ಬಳಸಿದ 2 ಗ್ಯಾಸ್ ಸಿಲಿಂಡರ್, 1 ಆಕ್ಸಿಜನ್ ಸಿಲಿಂಡರ್, ಬರ್ನಿಂಗ್ ಗನ್, ಸ್ಪ್ಯಾನರ್, ನಾಲ್ಕು ವಾಕಿಟಾಕಿ ಹಾಗೂ ಒಂದು ಪಿಸ್ತೂಲ್ ನಂತಿರುವ ಸಿಗರೇಟ್ ಲೈಟರ್ ವಶಕ್ಕೆ ಪಡೆಯಲಾಗಿದೆ ಎಂದು ಐಜಿಪಿ ಚೇತನಕುಮಾರ ರಾಠೋಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈವರೆಗೆ ಒಟ್ಟು 15 ಆರೋಪಿಗಳನ್ನು ಬಂಧಿಸಿ 39 ಕೆಜಿ ಬಂಗಾರದ ಗಟ್ಟಿ ಹಾಗೂ ಆಭರಣಗಳನ್ನು ಮತ್ತು 1.16 ಕೋಟಿ ನಗದು, ಕೃತ್ಯಕ್ಕೆ ಬಳಸಿದ ವಾಹನ ಸೇರಿ ಒಟ್ಟು 39.26 ಕೋಟಿ ರೂ.ಗಳಿಗಿಂತಲೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಶೇ. 85 ರಷ್ಟು ಸಾಮಗ್ರಿ ಹಾಗೂ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಎರಡ್ಮೂರು ಆರೋಪಿಗಳಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಐಜಿಪಿ ಚೇತನಕುಮಾರ ರಾಠೋಡ ತಿಳಿಸಿದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ತನಿಖಾ ತಂಡದ ಕಾರ್ಯ ಶ್ಲಾಘಿಸಿದ್ದಾರಲ್ಲದೇ ಸೂಕ್ತ ಬಹುಮಾನ ವಿತರಿಸಿದರು. ಎಎಸ್‌ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಟಿ.ಎಸ್. ಸುಲ್ಫಿ, ಸುನೀಲ ಕಾಂಬಳೆ, ತನಿಖಾಧಿಕಾರಿ ರಮೇಶ ಅವಜಿ ಮತ್ತಿತರರು ಇದ್ದರು.