ಶಿವಮೊಗ್ಗ: ಭದ್ರಾವತಿಯ ಎಂಪಿಎಂ ಕಾರ್ಖಾನೆಯನ್ನು ರಾಜ್ಯ ಸರ್ಕಾರದಿಂದ ನಿರ್ವಹಣೆ ಮಾಡುವುದು ಸದ್ಯಕ್ಕೆ ಅಸಾಧ್ಯ. ಖಾಸಗಿಯವರಿಗೆ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಪಿಎಂ ಕಾರ್ಖಾನೆ ಪುನರಾರಂಭ ಸಂಬಂಧ ಈಗಾಗಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜತೆ ಚರ್ಚಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆ ನಿರ್ವಹಿಸಲು ಆಗುವುದಿಲ್ಲ. ರಾಜ್ಯದಲ್ಲಿ ನೀಲಗಿರಿ ಮತ್ತು ಅಕೇಶಿಯಾ ಬೆಳೆಸಲು ನಿಷೇಧವಿದೆ. ಆದ್ದರಿಂದ ಕಾರ್ಖಾನೆಯನ್ನು ವಹಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂದು ತಿಳಿಸಿದರು.
ಹಾಲಿ ಕಾರ್ಖಾನೆ ಹೆಸರಿನಲ್ಲಿನ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಅಕೇಶಿಯಾ ಮತ್ತು ನೀಲಗಿರಿ ಬಳಸಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ಕೇಳಿದ್ದೇವೆ. ಕಾರ್ಖಾನೆ ಪುನರಾರಂಭ ಸಂಬಂಧ ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನೀಲಗಿರಿ ಮತ್ತು ಅಕೇಶಿಯಾ ಬೆಳೆಸಿ ಕಾರ್ಖಾನೆ ಆರಂಭಿಸಿ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಇದನ್ನು ಬೆಳೆಸುವುದರಿಂದ ಅಂತರ್ಜಲ ಕುಸಿತ ಆಗುತ್ತದೆ ಎನ್ನುತ್ತಿದ್ದಾರೆ. ಈ ವಿಷಯದಲ್ಲಿ ನಮ್ಮ ಇಲಾಖೆಗಿಂತ ಅರಣ್ಯ ಇಲಾಖೆ ಜವಾಬ್ದಾರಿ ಹೆಚ್ಚಾಗಿದೆ. ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಇದೇ ವೇಳೆ ಭದ್ರಾವತಿ ವಿಎಸ್‌ಐಎಲ್ ಕಾರ್ಖಾನೆ ಪುನರುಜ್ಜೀವನ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಲ್ಲವೂ ಸರಿಹೋಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.