ಬಸವನಬಾಗೇವಾಡಿ ಪಟ್ಟಣದ ಇಂದಿರಾ ಕ್ಯಾಂಟಿನ್‌ಗೆ ವಿಜಯಪುರ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಿ.ಎ. ಸೌದಾಗರ ಭೇಟಿ ನೀಡಿ ಪರಿಶೀಲಿಸಿದರು. 
ಜಿಲ್ಲೆ

ಇಂದಿರಾ ಕ್ಯಾಂಟಿನ್ ಸಮರ್ಪಕ ನಿರ್ವಹಿಸಿ

Vijayapura - Desk - Gurappa Lokuri

ಬಸವನಬಾಗೇವಾಡಿ: ಪಟ್ಟಣದ ಇಂದಿರಾ ಕ್ಯಾಂಟಿನ್‌ಗೆ ವಿಜಯಪುರ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಬಿ.ಎ. ಸೌದಾಗರ ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು.

ಪಟ್ಟಣದ ಬಸ್ ನಿಲ್ದಾಣ ಬಳಿಯ ಇಂದಿರಾ ಕ್ಯಾಂಟಿನ್‌ನಲ್ಲಿ ಐದು ತಿಂಗಳ ಹಿಂದೆ 5 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು, ಕ್ಯಾಂಟಿನ್‌ಗೆ ಸುಣ್ಣ-ಬಣ್ಣ ಹಾಗೂ ಸಿ.ಸಿ. ಟಿವಿ ಸೇರಿ ಇನ್ನಿತರ ಸಣ್ಣ ಪುಟ್ಟ ಕೆಲಸಗಳ ದುರಸ್ತಿ ಮಾಡಲಾಗಿದೆ. ಆದರೂ ಸದ್ಯ ಕುಡಿಯುವ ನೀರಿನ ನಳ ಕಿತ್ತುಹೋಗಿದ್ದನ್ನು ಕಂಡು ಸ್ಥಳದಲ್ಲಿದ್ದ ಜೆ.ಇ. ಸಂತೋಷ ಗಿಡ್ಡಸಣ್ಣವರ ಅವರನ್ನು ತರಾಟೆಗೆ ತೆಗೆದುಕೊಂಡ ಸೌದಾಗರ, ನಿಮಗೆ ಸರಿಯಾಗಿ ಕೆಲಸ ಮಾಡುವುದಿದ್ದರೆ ಇರಿ, ಇಲ್ಲವಾದರೆ ಬೇರೆಡೆ ಹೋಗಿ ಎಂದರಲ್ಲದೆ, ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ಸರ್ಕಾರ ಇಷ್ಟೆಲ್ಲಾ ಖರ್ಚು ಮಾಡಿ ಅಡುಗೆ ಸಾಮಗ್ರಿಗಳನ್ನು ನೀಡಿದರೂ ಅವುಗಳನ್ನು ಏಕೆ ಬಳಸುತ್ತಿಲ್ಲ? ಎಂದು ಪ್ರಶ್ನಿಸಿದರಲ್ಲದೆ, ಸಾರ್ವಜನಿಕರಿಗೆ ಉತ್ತಮ ಊಟ ಮತ್ತು ಉಪಾಹಾರ ವ್ಯವಸ್ಥೆ ಮಾಡಬೇಕು. ನಿತ್ಯ ನಾಮಫಲಕದಲ್ಲಿ ಕ್ಯಾಂಟಿನ್‌ನಲ್ಲಿ ಸಿದ್ಧಪಡಿಸುವ ಆಹಾರ ಪದ್ಧತಿಯ ಮೆನುವನ್ನು ದೊಡ್ಡ ಅಕ್ಷರದಲ್ಲಿ ಬರೆದಿರಬೇಕು. ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಅಧಿಕಾರಿಗಳು ನಿರ್ಲಕ್ಷೃ ವಹಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಪುರಸಭೆ ಮುಖ್ಯಅಧಿಕಾರಿ ರುದ್ರೇಶ ಚಿತ್ತರಗಿ, ಜೆ.ಇ. ಮಹಾದೇವ ಜಂಬಗಿ, ಆರೋಗ್ಯ ಕಿರಿಯ ನಿರೀಕ್ಷಕ ಮಹೇಶ ಹಿರೇಮಠ ಮತ್ತಿತರರಿದ್ದರು.