ಜಿಲ್ಲೆ

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ನದಿಗೆ ಬಿದ್ದ ವ್ಯಕ್ತಿ ಸಾವು ?

ಕನಕಪುರ: ಜೂಜಾಟ ಆಡುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅರ್ಕಾವತಿ ನದಿಯಲ್ಲಿ ಬಿದ್ದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತೇರಿನದೊಡ್ಡಿ ಗ್ರಾಮದ ಬಳಿ ನಡೆದಿದೆ.

ತಾಲೂಕಿನ ತಿಗಳರಹೊಸಹಳ್ಳಿ ಗ್ರಾಮದ ಮರಿಸ್ವಾಮಿ ಅಲಿಯಾಸ್ ಪಿರಿ(30) ಮೃತಪಟ್ಟ ವ್ಯಕ್ತಿ. ಮಂಗಳವಾರ ಸಂಜೆ ತೇರಿನದೊಡ್ಡಿ ಗ್ರಾಮದ ಸಮೀಪ 8 ಮಂದಿ ಯುವಕರು ಇಸ್ಪೀಟ್ ಆಡುತ್ತಿದ್ದರು ಕನಕಪುರ ಗ್ರಾಮಾಂತರ ಪೋಲಿಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಡೀ ಗುಂಪು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದೆ.

ಈ ಸಂದರ್ಭದಲ್ಲಿ ಮರಿಸ್ವಾಮಿ ಅರ್ಕಾವತಿ ನದಿ ನೀರಿನ ಗುಂಡಿಯೊಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಇದರ ಬಗ್ಗೆ ಪೊಲೀಸರು ಸಹ ಗಮನ ಹರಿಸಲಿಲ್ಲ ಎನ್ನಲಾಗಿದ್ದು, ಆದರೆ ಗುರುವಾರ ಮರಿಸ್ವಾಮಿ ಮೃತದೇಹ ಅರ್ಕಾವತಿ ನದಿಯಲ್ಲಿ ತೇಲಿದೆ.

ಯಾರು ಹೊಣೆ?: ಮರಿಸ್ವಾಮಿ ನಾಪತ್ತೆಯಾಗಿದ್ದು, ಯಾರ ಗಮನಕ್ಕೂ ಬಂದಿಲ್ಲವೇ?, ಇಲ್ಲ ಮರಿಸ್ವಾಮಿ ಸಾವು ನಿಗೂಢವಾಗಿ ಇದೆಯೇ?, ಪೋಲಿಸರು ಗೊತ್ತಿದ್ದು ಸುಮ್ಮನಾದರೇ? ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡು ಮರಿಸ್ವಾಮಿ ಸಾವಿಗೆ ನ್ಯಾಯ ಕೊಡುವಂತೆ ಒತ್ತಾಯಿಸಿ ಕುಟುಂಬದ ಸದಸ್ಯರು ಅಕ್ಕಪಕ್ಕದ ಗ್ರಾಮಸ್ಥರು ಗುರುವಾರ ಠಾಣೆಯ ಮುಂದೆ ಜಮಾಮಿಸಿ, ತಪ್ಪಿತಸ್ಥರ ವಿರುದ್ಧ  ಕಾನೂಕು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.