ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 
ಜಿಲ್ಲೆ

ಸ್ಕೂ ಡ್ರೈವರ್‌ನಿಂದ ಚುಚ್ಚಿ ಹೆಂಡತಿ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ಹೆಂಡತಿಯನ್ನು ಸ್ಕೂ ಡ್ರೈವರ್‌ನಿಂದ ಚುಚ್ಚಿ ಕೊಲೆ ಮಾಡಿದ್ದ ವ್ಯಕ್ತಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

ವಿನಾಯಕ ವೃತ್ತದ ಮಲ್ಲಿಕಾರ್ಜುನ ಬಡಾವಣೆಯ ಸೈಯದ್ ಫರ್ವೀಜ್ ಜೀವಾವಧಿ ಶಿಕ್ಷೆಗೆ ಒಳಗಾದವರು. ಪತ್ನಿ ಪರ್ವೀಜ್ ಫಾತಿಮಾ ಅವರನ್ನು ಮದುವೆಯಾಗಿದ್ದ ಸೈಯದ್ ಫರ್ವೀಜ್‌ಗೆ ಮೂವರು ಮಕ್ಕಳಿದ್ದರು. ಪತ್ನಿ ಶೀಲ ಶಂಕಿಸಿ 2020ರ ನ.1ರಂದು ಫಾತಿಮಾಳನ್ನು ಆಕೆಯ ತಂದೆ-ತಾಯಿ ಎದುರಲ್ಲೇ ಸ್ಕ್ರೂ ಡ್ರೈವರ್ ಮತ್ತು ಚಾಕುನಿಂದ ಇರಿದು ಹತ್ಯೆ ಮಾಡಿದ್ದ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಮರುಳಸಿದ್ಧ ಆರಾಧ್ಯ ಅವರು ಸೈಯದ್ ಫರ್ವೀಜ್ ಮೇಲಿನ ಆರೋಪ ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಬಿ.ಎಸ್.ಮಮತಾ ಅವರು ಸರ್ಕಾರ ಪರವಾಗಿ ವಾದ ಮಂಡಿಸಿದ್ದರು.