ಜಿಲ್ಲೆ

ಬಾಲಕಿ ಅತ್ಯಾಚಾರ ಮಾಡಿದ್ದವನಿಗೆ ಕಾರಾಗೃಹ ಶಿಕ್ಷೆ

ಗಂಗಾಧರ ಬಿ ವಿ

ಚನ್ನಪಟ್ಟಣ

ಪೋಕ್ಸೋ ಪ್ರಕರಣದ ಆರೋಪಿಯೊರ್ವನಿಗೆ ನ್ಯಾಯಾಲಯ 20 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 24 ಸಾವಿರ ರೂ ದಂಡ ವಿಧಿಸಿದೆ.

ಪುನೀತ್ ಶಿಕ್ಷೆಗೆ ಒಳಗಾದ ಅಪರಾಧಿ. ಈತನ ವಿರುದ್ಧ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವಿತ್ತು. ಪ್ರಕರಣದ ವಿಚಾರಣೆ ನಡೆಸಿದ ರಾಮನಗರದ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಂ. ಪಂಚಾಕ್ಷರಿ, ಪ್ರಕರಣದಲ್ಲಿ ಆರೋಪಿಯ ವಿರುದ್ದ ಆರೋಪ ಸಾಬೀತಾದ ಹಿನ್ನೇಲೆಯಲ್ಲಿ ಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ?

2020 ರ ಜುಲೈ 24 ರಂದು 11 ವರ್ಷದ ಬಾಲಕಿಯೊರ್ವಳು ತಿಂಡಿ ತೆಗೆದುಕೊಂಡು ಮನೆಗೆ ಹೋಗುವ ಸಮಯದಲ್ಲಿ, ಈತ ನಿಮ್ಮ ತಂದೆ ಕರೆಯುತ್ತಿದ್ದಾರೆ ನಿಮ್ಮ ತಂದೆಯ ಬಳಿಗೆ ಹೋಗೋಣ ಬಾ ಎಂದು ಬಾಲಕಿಯನ್ನು ಪುಸಲಾಯಿಸಿ, ತನ್ನ  ದ್ವಿಚಕ್ರ ವಾಹನದಲ್ಲಿ
ಸಿಂಗರಾಜಿಪುರ ಗ್ರಾಮದ ಪಕ್ಕದಲ್ಲಿರುವ ಚನ್ನಪ್ಪನಗುಡ್ಡೆಗೆ ಕರೆದು ಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಸಹ ಕಿತ್ತುಕೊಂಡು ಪರಾರಿಯಾಗಿದ್ದನು.

ಈ ಬಗ್ಗೆ ಬಾಲಕಿಯ ಕುಟುಂಬಸ್ಥರು ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡು, ಕೃತ್ಯ ನಡೆಸಿದ್ದ ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ಸಾಕ್ಷಾಧಾರಗಳನ್ನು ಸಂಗ್ರಹಿಸುವ ಜೊತೆಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ವಕೀಲೆ ಎನ್ ವೀಣಾಕುಮಾರಿ ವಾದವನ್ನು ಮಂಡಿಸಿದ್ದರು. ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಚನ್ನಪಟ್ಟಣ ಗ್ರಾಮಾಂತರ ವೃತ್ತ ಮತ್ತು ಅಕ್ಕೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.