ಮಂಗಳೂರು: ನಗರದ ಹೊರವಲಯದ ಜಪ್ಪಿನಮೊಗರು ಬಳಿಯ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಪ್ರಯತ್ನಿಸಿ ನಾಪತ್ತೆಯಾಗಿದ್ದ ಯುವಕ ಬುಧವಾರ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾನೆ.
ಮುಡಿಪು ಸಮೀಪದ ಕುರ್ನಾಡು ಹೂವಿನಕೊಪ್ಪಲ ನಿವಾಸಿ ಪ್ರವೀಣ್ ಸಪಲ್ಯ (28) ಜೂ. 9ರ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದು, ಆತನ ಬೈಕ್ ಸೇತುವೆ ಮೇಲೆ ಪತ್ತೆಯಾಗಿತ್ತು. ಮೊಬೈಲ್ ಸ್ವಿಚ್ಡ್ ಆಫ್ ಆಗಿ, ಸಂಪರ್ಕ ಸಾಧ್ಯವಾಗಿರಲಿಲ್ಲ. ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.
ನದಿಯಲ್ಲಿ ಆತನಿಗಾಗಿ ಅಗ್ನಿಶಾಮಕ ದಳ, ಪೊಲೀಸ್, ಮುಳುಗು ತಜ್ಞರು ತೀವ್ರ ಶೋಧಕಾರ್ಯ ನಡೆಸಿದ್ದಾರೆ. ಸೇತುವೆ ಮೇಲೆ ಬೈಕ್ ಇಟ್ಟು ಪ್ರವೀಣ್ ನಾಪತ್ತೆಯಾದ ಕಾರಣ ಮನೆಯವರು ತೀವ್ರ ಆತಂಕಗೊಂಡಿದ್ದರು. ನೇತ್ರಾವತಿ ಸೇತುವೆ ಬಳಿ ಬೆಳಗ್ಗೆಯಿಂದಲೇ ನೂರಾರು ಕುತೂಹಲಿಗರು ಜಮಾಯಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಮಾಹಿತಿ ಪಡೆದ ಪ್ರವೀಣ್ ತಾನೇ ಮನೆಗೆ ಕರೆ ಮಾಡಿ ಶಿವಮೊಗ್ಗದ ಸಂಬಂಧಿಕರ ಮನೆಯಲ್ಲಿ ಇರುವ ವಿಚಾರ ತಿಳಿಸಿದ್ದಾನೆ. ತಕ್ಷಣ ಮನೆಮಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರವೀಣ್ ಖಾಸಗಿ ಕಂಪನಿಯಲ್ಲಿ ಸೇಲ್ಸ್ಮನ್. ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಸಾಲ ಮಾಡಿದ್ದ. ಸಾಲ ನೀಡಿದ್ದವರು ಹಣ ಮರುಪಾವತಿ ಮಾಡುವಂತೆ ಒತ್ತಡ ಹೇರುತ್ತಿದ್ದರು. ಕಾಟ ತಾಳಲಾರದೆ ಬೈಕನ್ನು ಸೇತುವೆ ಮೇಲೆ ನಿಲ್ಲಿಸಿ ಪ್ರವೀಣ್ ಶಿವಮೊಗ್ಗಕ್ಕೆ ತೆರಳಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.