ಜಿಲ್ಲೆ

ಗಾಯಾಳು ಸಾವಿಗೆ ಕಾರಣನಾದ ವ್ಯಕ್ತಿಗೆ 6 ತಿಂಗಳು ಜೈಲು

ಹುಬ್ಬಳ್ಳಿ: ಪಾದಚಾರಿಗೆ ಡಿಕ್ಕಿ ಹೊಡೆದು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದೇ ಆತನ ಸಾವಿಗೆ ಕಾರಣವೆಂದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಇಲ್ಲಿಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು 4 ಸಾವಿರ ರೂ. ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸತೀಶ ಸಾಂಬ್ರಾಣಿ ಶಿಕ್ಷೆಗೆ ಒಳಗಾದ ವ್ಯಕ್ತಿ. 2022ರ ಡಿ. 18ರಂದು ಗದಗ ರಸ್ತೆಯಲ್ಲಿ ವೇಗವಾಗಿ ವಾಹನ ನಡೆಸಿ ರಸ್ತೆ ದಾಟುತ್ತಿದ್ದ ಲಕ್ಷ್ಮೀನಾರಾಯಣ ಕೂಡಲ್ ಎಂಬಾತನಿಗೆ ಡಿಕ್ಕಿ ಹೊಡೆದಿದ್ದ. ಅಲ್ಲದೆ, ಬೈಕ್ ನಿಲ್ಲಿಸದೇ ಪರಾರಿಯಾಗಿದ್ದ. ಘಟನೆಯಲ್ಲಿ ಲಕ್ಷ್ಮೀನಾರಾಯಣ ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. 2022ರ ಡಿ. 23ರಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದ.

ಈ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕ ಶ್ರೀಶೈಲ ಗಾಬಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಕರೇಹನುಮಂತಪ್ಪ ಅವರು ವಿವಿಧ ತಪ್ಪಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಇತ್ತೀಚೆಗೆ ತೀರ್ಪು ನೀಡಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ಗಂಗಾಧರಗೌಡ ಸರ್ಕಾರದ ಪರ ವಾದ ಮಂಡಿಸಿದ್ದರು.