ಜಿಲ್ಲೆ

'ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊ' ಎಂದ ಸಂಬಂಧಿಕರಿಬ್ಬರಿಗೂ ಇರಿದ; ಒಬ್ಬನ ಸಾವು, ಇನ್ನೊಬ್ಬನ ಪರಿಸ್ಥಿತಿ ಗಂಭೀರ

ಬೆಂಗಳೂರು: ಪತ್ನಿಯನ್ನು ಚೆನ್ನಾಗಿ ನೋಡಿಕೊ ಎಂದು ಬುದ್ಧಿವಾದ ಹೇಳಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಇಬ್ಬರು ಸಂಬಂಧಿಕರಿಗೆ ಚಾಕುವಿನಿಂದ ಇರಿದಿದ್ದು, ಇದರ ಪರಿಣಾಮವಾಗಿ ಓರ್ವ ಮೃತಪಟ್ಟು ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಪ್ರಕರಣ ಸೋಲದೇವನಹಳ್ಳಿ ನಡೆದಿದೆ.

ಪೀಣ್ಯ 2ನೇ ಹಂತದ ತಿಗಳರಪಾಳ್ಯ ಮುಖ್ಯರಸ್ತೆಯ ನಿವಾಸಿ ಕೇಶವಮೂರ್ತಿ (32) ಕೊಲೆಯಾದವರು. ಈತನ ಬಾವಮೈದುನ ಕಲ್ಲೇಶ್ (27) ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ಚಿಕಿತ್ಸೆ ಮುಂದುವರಿದಿದೆ. ಜ.13ರ ರಾತ್ರಿ ಈ ಘಟನೆ ನಡೆದಿದ್ದು, ಪ್ರಕರಣದ ಸಂಬಂಧ ಆರೋಪಿ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ನಿವಾಸಿ ಭರತ್(28) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಭರತ್ ಹಾಗೂ ಆತನ ಪತ್ನಿ ರಾಧಾ ನಡುವೆ ಆಗಾಗ ಜಗಳವಾಗುತ್ತಿತ್ತು. ಕೆಲ ದಿನಗಳ ಹಿಂದೆ ಪತ್ನಿಯ ಜತೆ ಜಗಳ ಮಾಡಿಕೊಂಡು ಭರತ್ ಮನೆಗೆ ಹೋಗಿರಲಿಲ್ಲ. ಹೀಗಾಗಿ ಪತ್ನಿ ರಾಧಾ ತಮ್ಮ ಅತ್ತೆಯ ಮಗನಾದ ಕೇಶವಮೂರ್ತಿಗೆ ಕರೆ ಮಾಡಿ, ನನ್ನ ಗಂಡ ಮೂರು ದಿನಗಳಿಂದ ಮನೆಗೆ ಬಂದಿಲ್ಲ. ಅಲ್ಲಿ ಎಲ್ಲಾದರೂ ಸಿಕ್ಕರೆ ಬುದ್ಧಿ ಹೇಳಿ ಮನೆಗೆ ಕಳುಹಿಸು ಎಂದು ಹೇಳಿದ್ದಾರೆ.

ಕೇಶವಮೂರ್ತಿ ಹಾಗೂ ಆತನ ಬಾವಮೈದುನ ಕಲ್ಲೇಶ್ ಜ.13ರಂದು ರಾತ್ರಿ 8 ಗಂಟೆಗೆ ಆರೋಪಿ ಭರತ್‌ಗೆ ಕರೆ ಮಾಡಿ ಪೀಣ್ಯ ಎರಡನೇ ಹಂತದ ಮಂದಾರ ಬಾರ್‌ಗೆ ಕರೆಸಿಕೊಂಡು, ಮೂವರು ಮದ್ಯ ಸೇವಿಸಿದ್ದಾರೆ. ಈ ವೇಳೆ ಕೇಶವಮೂರ್ತಿ, ಮೂರು ದಿನದಿಂದ ಮನೆಗೆ ಹೋಗದಿರುವ ಬಗ್ಗೆ ಭರತ್‌ನನ್ನು ಪ್ರಶ್ನಿಸಿ, ಕೈಗಳಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಇಬ್ಬರು ಪರಸ್ಪರ ಬೈದಾಡಿಕೊಂಡು ಸಮಾಧಾನವಾಗಿದ್ದಾರೆ.

ನನ್ನ ಮಕ್ಕಳ ನನಗೆ ಬುದ್ಧಿ ಹೇಳುತ್ತೀರಾ?: ಹಲ್ಲೆಯಿಂದ ಆಕ್ರೋಶಗೊಂಡಿದ್ದ ಆರೋಪಿ ಭರತ್, ಪತ್ನಿಯ ಊರು ಮತ್ಕೂರಿಗೆ ಹೋಗೋಣವೆಂದು ಕೇಶವಮೂರ್ತಿ ಹಾಗೂ ಕಲ್ಲೇಶ್‌ನನ್ನು ಕರೆಯುತ್ತಾನೆ. ಬಳಿಕ ಮೂವರು ದ್ವಿಚಕ್ರ ವಾಹನದಲ್ಲಿ ಮತ್ಕೂರು ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ಹೆಸರಘಟ್ಟ ಮುಖ್ಯರಸ್ತೆ ದ್ವಾರಕನಗರದ ಹಿಮಾಲಯ ಡಾಬಾ ಬಳಿಯ ಚಿಗಾರಿ ವೈನ್ಸ್‌ನಲ್ಲಿ ಮದ್ಯ ಖರೀದಿಸಿ ಅಲ್ಲೇ ಹೊರಗೆ ಕುಳಿತು ಮದ್ಯ ಸೇವಿಸಲು ಆರಂಭಿಸಿದ್ದಾರೆ.

ಮದ್ಯ ಸೇವನೆ ನಡುವೆ ರಾತ್ರಿ 10.45ರ ಸುಮಾರಿಗೆ ಆರೋಪಿ ಭರತ್ ಏಕಾಏಕಿ ಕೇಶವಮೂರ್ತಿ ಹಾಗೂ ಕಲ್ಲೇಶ್‌ನನ್ನು ನಿಂದಿಸಲು ಆರಂಭಿಸಿದ್ದು, ‘ನನ್ನ ಮಕ್ಕಳ, ನನಗೆ ಬುದ್ಧಿ ಹೇಳುತ್ತೀರಾ. ನಿಮ್ಮನ್ನು ಮರ್ಡರ್ ಮಾಡದೇ ಬಿಡುವುದಿಲ್ಲ’ ಎಂದು ಜೇಬಿನಿಂದ ಚಾಕು ತೆಗೆದು ಮೊದಲು ಕಲ್ಲೇಶ್‌ಗೆ ಇರಿದಿದ್ದಾನೆ. ಈ ವೇಳೆ ಕೇಶವಮೂರ್ತಿ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ, ಅಟ್ಟಾಡಿಸಿ ರಸ್ತೆಗೆ ಕೆಡವಿ ಎದೆ, ಹೊಟ್ಟೆ ಭಾಗಕ್ಕೆ ಹತ್ತಾರು ಬಾರಿ ಇರಿದು ದ್ವಿಚಕ್ರ ವಾಹನ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆಗೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ಬರು ಗಾಯಾಳುಗಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ, ಎದೆ ಭಾಗಕ್ಕೆ ತೀವ್ರ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಕೇಶವಮೂರ್ತಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಈ ಸಂಬಂಧ ಗಾಯಾಳು ಕಲ್ಲೇಶ್ ನೀಡಿದ ದೂರಿನ ಮೇರೆಗೆ ಕೊಲೆಗೆ ಯತ್ನ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಭರತ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.