ಮುದ್ದೇಬಿಹಾಳ: ಯಾವುದೇ ಒಂದು ಧರ್ಮ, ಜಾತಿಗೆ ಸೀಮಿತವಾಗಿರದ ಭಗವದ್ಗೀತೆ ಗ್ರಂಥವನ್ನು ಶಾಲಾ ಮಕ್ಕಳಿಗೆ ಬರುವ ವರ್ಷದಿಂದ ಉಚಿತ ನೋಟಬುಕ್ ವಿತರಿಸಲು ಚಿಂತನೆ ನಡೆಸಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದ ಯಾವುದೇ ವ್ಯಕ್ತಿಯ ಬದುಕಿನಲ್ಲಿ ಓದಲೇಬೇಕಾದ, ತಿಳಿದುಕೊಳ್ಳಬೇಕಾದ ಗ್ರಂಥ ಭಗವದ್ಗೀತೆಯಾಗಿದೆ. ಭಗದ್ಗೀತೆಯ ಸಾರ ಮನುಷ್ಯನು ಸತ್ಯವಂತ, ಧರ್ಮವಂತನಾಗಿ ಬದುಕಬೇಕು. ಭಗವಂತನಲ್ಲಿ ಶ್ರದ್ಧೆಯನ್ನಿಟ್ಟು ಪಠಿಸಬೇಕು ಎಂದರು.
ಇಳಕಲ್ಲಿನ ಎಸ್‌ವಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಪ್ರಸನ್ನ ಜೋಶಿ, ಜ್ಞಾನ ಭಾರತಿ ವಿದ್ಯಾಮಂದಿರ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕುಲಕರ್ಣಿ, ಕಾನಿಪ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ, ಟಿ.ಎಸ್.ರಾಮದುರ್ಗ, ಪ್ರಭು.ಎಸ್.ಕಡಿ, ವಿಠ್ಠಲ ಪದಕಿ, ಬಸನಗೌಡ ವಣಕ್ಯಾಳ ಇತರರಿದ್ದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರದಿಂದ ತೆರೆದ ವಾಹನದಲ್ಲಿ ಭಗವದ್ಗೀತೆಯೊಂದಿಗೆ ಶೋಭಾಯಾತ್ರೆ ನಡೆಸಲಾಯಿತು.