ಜಿಲ್ಲೆ

ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ತಲೆ ಬೋಳಿಸಿ ಹಲ್ಲೆ

ಕನಕಪುರ: ಅನ್ಯಧರ್ಮದ ಮಹಿಳೆ ಮತ್ತು ಪುರುಷ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಇಬ್ಬರ ಮೇಲೂ ಹಲ್ಲೆ ನಡೆಸಿ, ತಲೆ ಬೋಳಿಸಿರುವ ಅಮಾನವೀಯ ಘಟನೆ ಶನಿವಾರ ಸಂಜೆ ನಗರದಲ್ಲಿ ನಡೆದಿದ್ದು, ಇಬ್ಬರು ಮಹಿಳೆಯರು ಹಾಗೂ ಕೆಲ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದ್ರಾನಗರದ ನಿವಾಸಿಗಳಾದ ಪುರುಷ ಹಾಗೂ ಮಹಿಳೆ ಇಬ್ಬರೂ ಬೇರೆ ಬೇರೆ ಧರ್ಮದವರು. ಇಬ್ಬರೂ ವಿವಾಹಿತರಾಗಿದ್ದೂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು.ಈ ಬಗ್ಗೆ ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಆದರೂ ಅಕ್ರಮ ಸಂಬಂಧ ಮುಂದುವರಿಸಿದ್ದರು. ಈ ಹಿನ್ನೆಯಲ್ಲಿ ಶನಿವಾರ ಸಂಜೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಸ್ಥಳಿಯ ಯುವಕರು ಹಾಗೂ ಮಹಿಳೆಯರು ಇಬ್ಬರನ್ನೂ ತಡೆದು, ಹಲ್ಲೆ ನಡೆಸಿದ್ದಲ್ಲದೇ ತಲೆ ಬೋಳಿಸಿದ್ದಾರೆ ಎನ್ನಲಾಗಿದ್ದು, ಮಾಹಿತಿ ತಿಳಿದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಿವಾಸ್​ ಗೌಡ, ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿ ಡಿ.ಎಸ್​.ರಾಜೇಂದ್ರ, ನಗರ ಠಾಣೆ ಸರ್ಕಲ್​ ಇನ್​ಸ್ಪೆಕ್ಟರ್​ ಅನಂತ್​ರಾಮ್​ ಸ್ಥಳ ಪರಿಶೀಲಿಸಿ, ಮಾಹಿತಿ ಪಡೆದಿದ್ದಾರೆ. ಸ್ಥಳದಲ್ಲಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.