ಮಂಗಳೂರು : ವಳಚ್ಚಿಲ್ ರೈಲ್ವೇ ಗೇಟ್ ಬಳಿ ಅಡ್ಯಾರ್ ಫಾಲ್ಸ್‌ಗೆ ದಾರಿ ಕೇಳಿಕೊಂಡು ಹೋಗಿದ್ದ ವ್ಯಕ್ತಿಯೋರ್ವನನ್ನು ಸುಲಿಗೆ ಮಾಡಿ ಜೀವಬೆದರಿಕೆ ಹಾಕಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜ್ವಲ್ ಸುಲಿಗೆಗೆ ಒಳಗಾದವರು. ಪ್ರಜ್ವಲ್ ಮಂಗಳವಾರದಂದು ಗೆಳತಿ ಸೌಮ್ಯ ಅವರನ್ನು ಬೈಕ್ ನಲ್ಲಿ ಕುಳ್ಳಿರಿಸಿಕೊಂಡು ಸೋಮೇಶ್ವರ ದೇವಸ್ಥಾನಕ್ಕೆ ಹೋಗಿ ಅನಂತರ ಅಡ್ಯಾರ್ ಫಾಲ್ಸ್ ಗೆಂದು ಹೊರಟು ಬೆಳಗ್ಗೆ ಸುಮಾರು 9.45ಕ್ಕೆ ವಳಚ್ಚಿಲ್ ರೈಲ್ವೆ ಗೇಟ್ ಬಳಿ ಹೋಗಿದ್ದರು. ಅಲ್ಲಿ ವ್ಯಕ್ತಿಯೊಬ್ಬರ ಬಳಿ ದಾರಿ ಕೇಳಿ ಅವರು ಹೇಳಿದಂತೆ ಸುಮಾರು 200 ಮೀಟರ್ ಮುಂದಕ್ಕೆ ಹೋಗಿದ್ದರು. ಮತ್ತೆ ದಾರಿ ಗೊತ್ತಾಗದ ಕಾರಣ ದಾರಿ ಕೇಳುವುದಕ್ಕಾಗಿ ರಸ್ತೆಯಿಂದ ಮೇಲೆ ಇರುವ ಮನೆಯ ಬಳಿ ಇದ್ದ ವ್ಯಕ್ತಿಯನ್ನು ಕರೆದರು. ಆ ವ್ಯಕ್ತಿ ಮನೆಯ ಬಳಿ ಬರುವಂತೆ ಹೇಳಿದ. ಪ್ರಜ್ವಲ್ ಬೈಕ್ ಮತ್ತು ಸೌಮ್ಯ ಅವರನ್ನು ರಸ್ತೆಯಲ್ಲಿ ನಿಲ್ಲಿಸಿ ಆ ಮನೆಯ ಹತ್ತಿರ ಹೋಗಿ ದಾರಿ ಕೇಳಿದರು. ಆಗ ಆರೋಪಿ ಅವಾಚ್ಯವಾಗಿ ಬೈದ. ಪ್ರಜ್ವಲ್ ಪೊಲೀಸರಿಗೆ ಪೋನ್ ಮಾಡುವುದಾಗಿ ಹೇಳಿದಾಗ ಆರೋಪಿ ಚೂರಿ ತೋರಿಸಿ ಬೆದರಿಸಿದ್ದಾನೆ. ಅಲ್ಲದೆ ಪ್ರಜ್ವಲ್ ಅವರ ಕೈಯಲ್ಲಿದ್ದ ಬೆಳ್ಳಿಯ ಬ್ರಾಸ್ ಲೆಟ್ ಮತ್ತು ಉಂಗುರವನ್ನು ಆರೋಪಿ ಕಿತ್ತುಕೊಂಡಿದ್ದಾನೆ. ಬಳಿಕ ಪ್ರಜ್ವಲ್ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದು ಪೊಲೀಸರಿಗೆ (112) ಕರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಆರೋಪಿ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.