ಜಿಲ್ಲೆ

ಮನುಷ್ಯನಿಗೆ ಆಧ್ಯಾತ್ಮಿಕ ಜ್ಞಾನದ ಹಸಿವು ಅಗತ್ಯ

ವಿವೇಕಾನಂದ ದಾಸನಕೊಪ್ಪ

ಸಿದ್ದಾಪುರ: ಮನುಷ್ಯನಿಗೆ ಎಲ್ಲ ಹಸಿವಿನಂತೆ ಆಧ್ಯಾತ್ಮಿಕ ಜ್ಞಾನದ ಹಸಿವು ಅಗತ್ಯ. ದೇವರು, ಧರ್ಮ-ನೀತಿಗಳ ಮೂಲಕ ಮನಸಿನ ಭಾವನೆಗಳಿಗೆ ತೃಪ್ತಿ ಹೊಂದಬಯಸುತ್ತಾನೆ. ಆಧ್ಯಾತ್ಮಿಕ ಹಸಿವು ಇಂಗಿಸಿಕೊಳ್ಳಲು ದೇವಸ್ಥಾನಕ್ಕೆ ತೆರಳಿ ದೇವರ ಮೊರೆ ಹೋಗುತ್ತಾನೆ. ಆದ್ದರಿಂದ ಭಕ್ತರಿಗೆ ದೇವರು, ದೇವಾಲಯ ತೀರಾ ಅಗತ್ಯ ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ. ಕೆ. ಶ್ರೀಧರ ವೈದ್ಯ ಹೇಳಿದರು.

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಮಾತನಾಡಿ, ನೀತಿ ನಡಾವಳಿಗಳನ್ನು ಧಾರ್ಮಿಕ ವಿಚಾರಗಳಿಂದ ಕಲಿಯಲು ಸಾಧ್ಯ. ವಿನಯಶೀಲ ಗುಣಗಳನ್ನು ತಿಳಿಯಲು ಸಾಧ್ಯ. ದೇವರ ಸಾನ್ನಿಧ್ಯದಿಂದ ಮನಸು ಹಗುರವಾಗುತ್ತದೆ ಎಂದರು.

ಸಾಹಿತಿ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ, ಎಲ್ಲಿ ಸ್ವಚ್ಛವಾದ ಮನಸು, ಪರಿಸರ ಭಾವನೆ ಇರುತ್ತದೆಯೋ ಅಲ್ಲಿ ದೇವರ ವಾಸ ಇರುತ್ತದೆ. ಅಯ್ಯಪ್ಪ ಸ್ವಾಮಿ ದೇವಾಲಯ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದರು.

ಪಶುಸಂಗೋಪನಾ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ನಂದಕುಮಾರ ಪೈ ಮಾತನಾಡಿ, ಜೀವನ ಬಲು ದೊಡ್ಡದು. ಮಾನವ ಬದುಕು ಅತ್ಯಂತ ಮಹತ್ವದ್ದು. ಜೀವನ ಸಾರ್ಥಕತೆಯ ಕ್ಷಣಗಳನ್ನು ಹೊಂದಬೇಕು ಎಂದರು.

ಸದಾನಂದ ಕಾಮತ ಉಪಸ್ಥಿತರಿದ್ದರು. ದೇವಾಲಯದ ಕಾರ್ಯದರ್ಶಿ ಸುದರ್ಶನ ಬಿ. ಪಿಳ್ಳೆ ಸ್ವಾಗತಿಸಿದರು. ಗಣಪತಿ ಹೊನ್ನೆಗುಂಡಿ ವಂದಿಸಿದರು.