ಜಿಲ್ಲೆ

ಒಂದೇ ಮಂಟಪದಲ್ಲಿ ಅಕ್ಕ ತಂಗಿ ಇಬ್ಬರನ್ನೂ ಮದುವೆಯಾಗಿದ್ದ ಉಮಾಪತಿ ಜೈಲುಪಾಲು! ಕಾರಣವೇನು ಗೊತ್ತಾ?

ಕೋಲಾರ: ಒಂದೇ ಮಂಟಪದಲ್ಲಿ ವ್ಯಕ್ತಿಯೊಬ್ಬ ಅಕ್ಕ ತಂಗಿ ಇಬ್ಬರನ್ನೂ ವರಿಸಿದ ಫೋಟೋ ಮತ್ತು ಅವರ ಮದುವೆಯ ಆಮಂತ್ರಣ ಪತ್ರ ಇತ್ತೀಚೆಗೆ ವೈರಲ್​ ಆಗಿತ್ತು. ಆದರೆ ಇದೀಗ ಕಥೆಯಲ್ಲಿ ಬಿಗ್​ ಟ್ವಿಸ್ಟ್ ಬಂದಿದೆ. ಮದುವೆಯ ಸಂತಸದಲ್ಲಿದ್ದ ವರನನ್ನು ಪೊಲೀಸರು ಜೈಲಿಗೆ ಹಾಕಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ವೇಗಮಡಗು ಗ್ರಾಮದ ಉಮಾಪತಿ ಹೆಸರಿನ ವ್ಯಕ್ತಿ ತನ್ನ ಅಕ್ಕನ ಮಕ್ಕಳಾದ ಸುಪ್ರಿಯಾ ಮತ್ತು ಲಲಿತಾಳನ್ನು ಮದುವೆಯಾಗಿದ್ದ. ಸುಪ್ರಿಯಾ ಹುಟ್ಟು ಮೂಕಿಯಾಗಿದ್ದರಿಂದ ಆಕೆಗೆ ವರ ಸಿಗದ ಹಿನ್ನೆಲೆಯಲ್ಲಿ ಇಬ್ಬರನ್ನೂ ಆತನೇ ವರಿಸಿದ್ದ ಎನ್ನಲಾಗಿತ್ತು. ಆದರೆ ಉಮಾಪತಿಯ ಪತ್ನಿಯಾಗಿ ಆತನ ಮನೆ ಸೇರಿರುವ ಲಲಿತಾಳ ವಯಸ್ಸು ಇನ್ನೂ 18 ತುಂಬಿಲ್ಲ. ಹಾಗಾಗಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವ ಆರೋಪದಲ್ಲಿ ಉಪಾಪತಿಯನ್ನು ಬಂಧಿಸಲಾಗಿದೆ.

ಮದುವೆಯ ಪೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಮದುವೆಯ ಕುರಿತು ಪರಿಶೀಲನೆ ಮಾಡಲು ಡಿಸಿ ಆರ್.ಸೆಲ್ವಮಣಿ ಆದೇಶಿಸಿದ್ದರು. ಈ ವೇಳೆ ಲಲಿತಾಳ ವಯಸ್ಸಿನ ವಿಚಾರ ತಿಳಿದುಬಂದಿದೆ. ಉಮಾಪತಿ ಸೇರಿ ಏಳು ಜನರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.