ವಿಜಯವಾಣಿ ಸುದ್ದಿಜಾಲ ತಿಪಟೂರು
ವಿಜ್ಞಾನ ಎಷ್ಟೇ ಮುಂದುವರಿದರೂ ಜ್ಞಾನವೆಂಬುದು ಮಸುಕಾಗಿದೆ. ಕಷ್ಟದ ಪ್ರತಿಕವಾದ ಮುಳ್ಳುಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಶ್ರೀ ಚೌಡೇಶ್ವರಿ ದೇವಿ ನೀಡುತ್ತಾಳೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನವರಾತ್ರಿ ಮತ್ತು ದಸರಾ ಪ್ರಯುಕ್ತ ತಾಲೂಕಿನ ದಸರೀಟ್ಟದಲ್ಲಿ 32ನೇ ವರ್ಷದ ಮುಳ್ಳುಗದ್ದಿಗೆ ಉತ್ಸವದ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಪ್ರಕೃತಿಯ ಮುಂದೆ ಮನುಷ್ಯ ಕ್ಷಣಿಕನಾಗಿದ್ದಾನೆ. ಅಃತಕರಣ ಶುದ್ಧಿಗೊಂಡರೆ ಮಾತ್ರ ಹೆಚ್ಚು ಶಕ್ತಿ ಪಡೆಯಬಹುದು. ಮನುಷ್ಯನ ಪಯಣ ಸದಾ ಸರಿದಾರಿಯಲ್ಲಿ ಸಾಗಬೇಕು. ದ್ವೇಷ, ಅಸೂಯೆ, ಸ್ವಾರ್ಥ ಬಿಟ್ಟು ನಡೆದಾಗ ದೇವಿಯ ಆಶೀರ್ವಾದ ಲಭಿಸುತ್ತದೆ ಎಂದರು.
ಮನುಷ್ಯನಲ್ಲಿ ಕಷ್ಟ ದೂರವಾಗಲು ಭಗವಂತನ ನಾಮಸ್ಮರಣೆ ಒಂದಿದ್ದರೆ ಸಾಕು. ಜಗತ್ತಿನ ಸೃಷ್ಟಿಗೆ ಭಗವಣತನೇ ಕಾರಣ, ಕಷ್ಟವನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ತಾಯಿ ನೀಡುತ್ತಾಳೆ. ಮುಳ್ಳುಗಳಂತಹ ಕಷ್ಟಗಳ ಮೇಲೆ ನಡೆಯುವಾಗ ಆಕೆ ಸ್ಮರಣೆ ಮಾಡಿದರೆ ಕಷ್ಟಗಳು ಮಂಜಿನಂತೆ ಕರಗುತ್ತವೆ. ಸಂಸಾರದ ಸಾಗರದಲ್ಲಿ ಸಹ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ನಿತ್ಯ ದೇವರ ಸ್ಮರಣೆ ಮಾಡಬೇಕು. ಶ್ರೀ ೇತ್ರದ ಅಭಿವೃದ್ಧಿಗೆ ಇಲ್ಲಿನ ಚಂದ್ರಶೇಖರನಾಥ ಸ್ವಾಮೀಜಿ, ಟ್ರಸ್ಟಿಗಳು, ಗ್ರಾಮಸ್ಥರು ಮತ್ತು ಇಲ್ಲಿನ ಜನಪ್ರತಿನಿಧಿಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ವಕೀಲ ಡಿ.ಎಲ್.ಜಗದೀಶ್ ಮಾತನಾಡಿ, ನವರಾತ್ರಿಯ ಸಂದರ್ಭದಲ್ಲಿ ಮನುಷ್ಯನಲ್ಲಿರುವ ಕೆಟ್ಟ ಗುಣ ಹೋಗಲಾಡಿಸಿ, ಉತ್ತಮ ಜೀವನ ನಡೆಸಲು ದೇವಿಯ ಆಶೀರ್ವಾದ ಅತ್ಯವಶ್ಯವಾಗಿದೆ. ಪ್ರತಿಯೊಬ್ಬರಲ್ಲಿಯೂ ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚಾಗುತ್ತಿದ್ದು, ಶ್ರದ್ಧಾ, ಭಕ್ತಿಯಿಂದ ನಡೆದಾಗ ದೇವಿ ಎಂದಿಗೂ ಯಾರನ್ನೂ ಕೈಬಿಡಲ್ಲ ಎಂದರು.
ಬಿಜಿಎಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶನಾಥ ಸ್ವಾಮೀಜಿ, ದಸರೀಟ್ಟ ಶಾಖಾಮಠದ ಶ್ರೀ ಚಂದ್ರಶೇಖಕರನಾಥ ಸ್ವಾಮೀಜಿ, ಮಂಗಳೂರು ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ಹಾಸನದ
ಶಂಭುನಾಥ ಸ್ವಾಮೀಜಿ, ಹೊಸಕೊಪ್ಪಲು ಮಠದ ಶ್ರೀ ಬಸವೇಶ್ವರ ಚೈತನ್ಯನಾಥ ಸ್ವಾಮೀಜಿ, ಮಠದ ಟ್ರಸ್ಟಿ ಡಾ.ಜಿತೇಂದ್ರ, ಗುಡಿಗೌಡರಾದ ಕುಮಾರಸ್ವಾಮಿ, ವೈದ್ಯ ಡಾ.ವಿವೇಚನ್ ಇದ್ದರು.
ಮುಳ್ಳು ಗದ್ದುಗೆ ವಿಶೇಷ
ನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ತಾಲೂಕಿನ ದಸರೀಟ್ಟದ ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ಅತ್ಯಂತ ವೈಭವ ಮತ್ತು ಭಕ್ತಿ ಪರಾಕಾಷ್ಠೆಯಿಂದ ನಡೆಯಿತು. ಸುಮಾರು 7&8 ಅಡಿಯಷ್ಟು ಉದ್ದ&ಅಗಲದ ಜಾಗದಲ್ಲಿ ಅಳೆತ್ತರದಷ್ಟು ಗಟ್ಟಿ ಕಾರೆಮುಳ್ಳಿನ ಗಿಡಗಳನ್ನು ರಾಶಿ ಹಾಕಲಾಗುತ್ತದೆ. ಈ ಮುಳ್ಳಿನ ರಾಶಿಯ ಮೇಲೆ ಚೌಡೇಶ್ವರಿ ದೇವಿಯವರ ಉತ್ಸವ ಮೂರ್ತಿಯನ್ನು ಭಕ್ತರು ಹೊತ್ತುಕೊಂಡ ಮುಳ್ಳಿನ ರಾಶಿ ತುಳಿಯುತ್ತಾ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮೂರ್ನಾಲ್ಕು ಬಾರಿ ಹತ್ತಿ ನಡೆಯುತ್ತಾರೆ. ಇದರ ಜತೆಗೆ ಹರಕೆ ಮಾಡಿಕೊಂಡ ಭಕ್ತ ಸಮೂಹವೂ ದೇವಿಯ ಹಿಂದೆ ನಡೆದುಕೊಂಡು ಹೋಗುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.