ಹೂವಿನಹಡಗಲಿ: ಭೂಮಿಯ ನೀರು ಕಲುಷಿತಗೊಳಿಸಿ, ಬೇರೆ ಗ್ರಹದಲ್ಲಿ ಹುಡುಕುತ್ತಿದ್ದೇವೆ ಎಂದು ಸ್ವಾಭಿಮಾನಿ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ ವೀರಾಪುರ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಮಂಗಳವಾರ ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಪಾದಯಾತ್ರೆ ಭಾಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದ ಜನರಲ್ಲಿ ಸಂವೇದನೆ ಕಡಿಮೆ ಇದೆ. ನಮ್ಮ ಜವಾಬ್ದಾರಿಗಳ ಕಡೆಗೆ ನಾವು ಗಮನ ನೀಡುತ್ತಿಲ್ಲ. ತುಂಗಭದ್ರಾ ನದಿ 2050ರ ಹೊತ್ತಿಗೆ ಕುಡಿಯಲು ಮಾತ್ರ ಉಳಿಯುವ ಹಂತಕ್ಕೆ ತಲುಪುತ್ತದೆ. ನದಿಯ ನೀರನ್ನು ನಾವು ತುರ್ತಾಗಿ ಉಳಿಸಬೇಕಾದ ಅವಶ್ಯಕತೆ ಇದೆ. ಸಂಸ್ಕೃತಿಯಿಂದ ಸಮಾಜದೆಡೆಗೆ ಹೋಗಬೇಕು ಎಂಬುದು ಆರೋಗ್ಯದ ಮೂಲ ಲಕ್ಷಣ. ಆದರೆ ನಾವು ಇವುಗಳ ಭ್ರಮೆಯಲ್ಲಿ ಭೂಮಿ, ಕಾಡು, ಖನಿಜ ಸಂಪತ್ತನ್ನು ಹಾಳು ಮಾಡುತ್ತಿದ್ದೇವೆ. ಸಮುದ್ರದ ಆಳದಲ್ಲಿಯೂ ಕೂಡ ಮೈನಿಂಗ್ ನಡೆಯುತ್ತಿದೆ ಎಂದು ತಿಳಿಸಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ನಾವು ಚರಂಡಿ, ತ್ಯಾಜ್ಯವನ್ನು ನದಿಗೆ ಹರಿಸದಂತೆ ಎಚ್ಚರಿಕೆ ವಹಿಸಬೇಕು. ಹಿಂದೆಲ್ಲ ಬಾವಿ, ಕೆರೆ ಹಾಗೂ ಜರಿಯ ನೀರನ್ನು ನೇರವಾಗಿ ಸೇವಿಸುತ್ತಿದ್ದೆವು. ಆದರೆ ಈಗ ನೀರನ್ನು ಶುದ್ಧೀಕರಿಸಿ ಕುಡಿಯುವ ಸ್ಥಿತಿಗೆ ಬಂದಿದ್ದೇವೆ ಎಂದರು.
ಕಾಯಕ ಭವನದ ಸಿಇಒ ಪುನೀತ್ ದೊಡ್ಡಮನಿ ಹಾಗೂ ಇತರರು ಮಾತನಾಡಿದರು. ಮುಖ್ಯ ಶಿಕ್ಷಕ ರವೀಂದ್ರನಾಥ, ಸಂಗೀತ ಶಿಕ್ಷಕ ಮೌಲಾಸಾಬ್, ಸಂಚಾಲಕ ಮಾಧವ್, ವಿದ್ಯಾರ್ಥಿಗಳು ಇತರರಿದ್ದರು.