ಮಂಗಳೂರು: ವ್ಯಕ್ತಿಯೊಬ್ಬ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಗರದ ಮುಗ್ರೋಡಿಯಲ್ಲಿ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.
ಮೃತನನ್ನು ಚಂದ್ರಕಾಂತ್ (41) ಎಂದು ಗುರುತಿಸಲಾಗಿದೆ. ಸ್ಥಳಿಯ ಬಾಡಿಗೆ ಮನೆಯಲ್ಲಿ ಪೋಷಕರೊಂದಿಗೆ ವಾಸವಾಗಿದ್ದ ಚಂದ್ರಕಾಂತ್ ಮೇಸ್ತ್ರಿ ಕೆಲಸದೊಂದಿಗೆ ಇತರ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದನು. ನರ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ಮಂಗಳವಾರವಷ್ಟೇ ಮನೆಗೆ ಬಂದಿದ್ದರು.
ಮಂಗಳವಾರ ಸಂಜೆ ಹೊತ್ತಿಗೆ ಚಿಕ್ಕಮ್ಮನ ಮನೆಗೆ ಹೋಗಿ ಬರುತ್ತೇನೆಂದು ಹೋಗಿದ್ದ ಚಂದ್ರಕಾಂತ್ ತಡ ರಾತ್ರಿಯಾದರೂ ಬಾರದ ಕಾರಣ ಸ್ಥಳಿಯರ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿದ್ದರು. ಬಳಿಕ ಆವರಣ ಇಲ್ಲದ ಬಾವಿ ಸಮೀಪ ಬುಧವಾರ ಅವರ ಪಾದರಕ್ಷೆ ಸಿಕ್ಕಿದ್ದರಿಂದ ಬಾವಿಯಲ್ಲಿ ಹುಡುಕುವಾಗ ಅವರ ಶವ ಪತ್ತೆಯಾಗಿದೆ. ಮಂಗಳೂರು ನಗರ ಠಾಣಾ ಪಿಎಸ್‌ಐ ಅನಿತಾ ನಿಕಂ ಮತ್ತು ಅಗ್ನಿಶಾಮಕದಳದ ನೆರವಿನೊಂದಿಗೆ ಶವವನ್ನು ಮೇಲಕ್ಕೆತ್ತಿ ಮಹಜರು ಮಾಡಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.