ಯಳಂದೂರು ತಾಲೂಕಿನ ಹೊನ್ನೂರು ಗ್ರಾಮಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದು. 
ಜಿಲ್ಲೆ

ಅಕ್ರಮ ಮದ್ಯ ಸಾಗಿಸುತ್ತಿದ್ದವನ ಬಂಧನ

ರವಿಕುಮಾರ್ ಪಿ. ಕೆ

ಯಳಂದೂರು: ಪಟ್ಟಣದಿಂದ ಹೊನ್ನೂರು ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸೋಮವಾರ ರಾತ್ರಿ ಅಕ್ರಮವಾಗಿ ಮೋಟಾರ್ ಬೈಕ್‌ನಲ್ಲಿ ಮದ್ಯ ತಗೆದುಕೊಂಡು ಹೋಗುತ್ತಿದ್ದ ಪಟ್ಟಣ ಸತೀಶ್ ಎಂಬಾತನನ್ನು ಮಾಲು ಸಮೇತ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇತ್ತೀಚೆಗೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಚಿಲ್ಲರೆ ಅಂಗಡಿ, ಸಣ್ಣಪುಟ್ಟ ಹೋಟೆಲ್, ಮನೆಗಳಲ್ಲಿ ಮದ್ಯವನ್ನು ಶೇಖರಣೆ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಮದ ಯುವ ಸಮುದಾಯ ಮದ್ಯದ ದಾಸರಾಗುತ್ತಿದ್ದು, ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಅಕ್ರಮ ಮದ್ಯ ಮಾರಾಟವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕು. ಇದನ್ನು ಸಾಗಿಸುವರ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿ, ತಾಲೂಕು ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಗಮನ ಹರಿಸುತ್ತಿಲ್ಲ. ಹಾಗಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ನಾವೇ ಪೊಲೀಸರಿಗೆ ಹಿಡಿದು ಕೊಟ್ಟಿದ್ದೇವೆ ಎಂದು ಗ್ರಾಮದ ಶಿವಪ್ರಸಾದ್, ಸಿದ್ದರಾಜು, ನೂತನ್, ಮಹೇಶ್ ಮಾಹಿತಿ ನೀಡಿದರು.

ನಂತರ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ಹನುಮಂತ ಉಪ್ಪಾರ್ ಹಾಗೂ ತಂಡ ಆರೋಪಿಯನ್ನು ಬಂಧಿಸಿ 90 ಎಂಎಲ್ ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.