ಜಿಲ್ಲೆ

ಒಣಗಾಂಜಾ ಹಿಡಿದು ಕುಳಿತಿದ್ದವನ ಬಂಧನ

ಅಭಿನಯ್ ಎಚ್.ಎಂ

ಹನೂರು: ಮಾರಾಟ ಮಾಡುವ ಉದ್ದೇಶದಿಂದ ಒಣಗಾಂಜಾ ಹಿಡಿದು ಕುಳಿತಿದ್ದವನನ್ನು ಪೊಲೀಸರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಆನೆತಲೆ ದಿಂಬದ ಬಳಿ ಸೋಮವಾರ ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿಯ ಗಮನಹಳ್ಳಿ ಗ್ರಾಮದ ಮಹೇಂದ್ರ (34) ಬಂಧಿತ ಆರೋಪಿ. ಈತ ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಆನೆತಲೆ ದಿಂಬದ ಕಾಲ್ನಡಿಗೆ ಭಕ್ತರು ಸಾಗುವ ದಾರಿಯಲ್ಲಿ ಪ್ಲಾಸ್ಟಿಕ್ ಕೈ ಚೀಲದಲ್ಲಿ ಒಣ ಗಾಂಜಾ ಹಿಡಿದು ಕುಳಿತಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಪಿ.ಜಗದೀಶ್ ಅವರು ಡಿವೈಎಸ್ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಬೀಜ ಮಿಶ್ರಿತ 160 ಗ್ರಾಂ ಒಣಗಾಂಜಾ ಹಾಗೂ ಸೇದುವ ಚಿಲುಮೆಯನ್ನು ವಶಕ್ಕೆ ಪಡೆದರು. ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಈ ಸಂಬಂಧ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.