ಹನೂರು: ಹಂಡತಿ ಬಿಟ್ಟು ಹೋಗಿದ್ದ ವ್ಯಕ್ತಿಯೋರ್ವ ತನ್ನ ಕಾಮತೃಷೆಗಾಗಿ ಅಪ್ರಾಪ್ತ ವಯಸ್ಕ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಹನೂರು ತಾಲ್ಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ಅರುಣ್ (31) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ಅರುಣ್ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಈತನಿಗೆ ಮದುವೆಯಾಗಿದ್ದು, ಪತ್ನಿ ಜೊತೆಗೆ ಇರದೆ ಬಿಟ್ಟು ಹೋಗಿದ್ದಾಳೆ. ಜೂನ್ 29ರಂದು ಬಾಲಕ ಶಾಲೆ ಮುಗಿಸಿಕೊಂಡು ಮನೆಗೆ ಬಂದು ತನ್ನ ತಮ್ಮನ ಜೊತೆ ಆಟವಾಡುತ್ತಿದ್ದಾಗ ಆರೋಪಿಯು ಬಾಲಕನನ್ನು ತನ್ನ ಮನೆಗೆ ಹೊತ್ತೊಯ್ದು ದೌರ್ಜನ್ಯ ಎಸಗಿದ್ದಾನೆ.
ಬಳಿಕ ಈ ವಿಚಾರ ಬಾಲಕನ ತಾಯಿಗೆ ತಿಳಿದಿದ್ದು, ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ವೈದ್ಯಕೀಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.