ತುಮಕೂರು: ಬೆಳೆಯುತ್ತಿರುವ ತುಮಕೂರು ನಗರದಲ್ಲಿ ನೀರಿನ ಪೂರೈಕೆಗೆ ಅನುಕೂಲವಾಗುವಂತೆ ಮರಳೂರು ಅಮಾನಿಕೆರೆಯಲ್ಲಿ ನೀರು ಸಂಗ್ರಹಣೆಗೆ ಬಳಸಿಕೊಳ್ಳಲು ಚಿಂತಿಸಲಾಗಿದ್ದು, ಕೆರೆಯನ್ನು ಸ್ವಚ್ಛಗೊಳಿಸಿ ಹೇಮಾವತಿ ನೀರು ತುಂಬಿಸಿ ನಗರವಾಸಿಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ನಗರದ ಮರಳೂರು ಅಮಾನಿಕೆರೆ ಮಳೆ ನೀರಿಗೆ ಕೋಡಿ ಹರಿದಿರುವ ಹಿನ್ನೆಲೆಯಲ್ಲಿ ಮಂಗಳವಾರ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮರಳೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಈ ಕೆರೆ ತಾಯಿ ಇದ್ದಂತೆ. ಕಳೆದ 3- ವರ್ಷಗಳಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಕೋಡಿಯಾಗುತ್ತಿದೆ. ತುಮಕೂರಿನ ದಕ್ಷಿಣ ಭಾಗದ ವಾರ್ಡ್ಗೆ ನೀರು ಒದಗಿಸಲು ಹೇಮಾವತಿ ನೀರು ಶೇಖರಿಸಿಟ್ಟುಕೊಳ್ಳಲು ಈ ಕೆರೆಯನ್ನು ಬಳಸಿಕೊಳ್ಳಲಾಗುವುದು, ಗಂಗಸಂದ್ರ, ಮೆಳೇಕೋಟೆ ಟೂಡಾ ಜಾಗದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗುವುದು ಎಂದರು.
ಬುಗುಡನಹಳ್ಳಿ ಕೆರೆಗೆ ನೀರು ಬರುವುದು ನಿಂತು ಹೋದರೆ ಇಡೀ ತುಮಕೂರು ಕೆರೆಗೆ ನೀರು ನಿಂತು ಹೋಗುತ್ತದೆ. ಮುಂಬರುವ ದಿನಗಳಲ್ಲಿ ಮರಳೂರು ಕೆರೆಗೆ ಹೇಮಾವತಿ ನೀರು ತುಂಬಿಸಿ ನಗರದ ಜನತೆಗೆ ನೀರು ಪೂರೈಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮರಳೂರು ಅಮಾನಿಕೆರೆ ಕಳೆದ 25- ವರ್ಷಗಳಲ್ಲಿ 3ನೇ ಬಾರಿಗೆ ಭರ್ತಿಯಾಗಿದೆ. ಕಳೆದ ವರ್ಷವೂ ಸುರಿದ ಭಾರಿ ಮಳೆಯಿಂದಾಗಿ ಕೆರೆ ತುಂಬಿತ್ತು. ಆ ಸಂದರ್ಭದಲ್ಲೂ ಸಹ ಕೆರೆಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಗಿತ್ತು. ಅದೇ ರೀತಿ ಗ್ರಾಮಸ್ಥರ ಸಮ್ಮುಖದಲ್ಲಿ ಕೆರೆಗೆ ಬಾಗಿನ ಅರ್ಪಿಸಲಾಗಿದೆ ಎಂದರು.
ಮರಳೂರು ಅಮಾನಿಕೆರೆ ತುಂಬಿರುವುದು ಗಂಗಸಂದ್ರ, ಮರಳೂರು, ಕುಮ್ಮಂಜಿಪಾಳ್ಯ ಸೇರಿದಂತೆ ಈ ಭಾಗದ ಹಳ್ಳಿಗಳ ರೈತರಿಗೆ ತುಂಬಾ ಅನುಕೂಲವಾಗಲಿದೆ. ಕೆರೆಯಿಂದ ಭರ್ತಿಯಾಗಿರುವುದರಿಂದ ಅಂತರ್ಜಲವೂ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಬರುತ್ತದೆ. ಹಾಗಾಗಿ, ಈ ಭಾಗದ ರೈತರು ಸಹ ಸಂತಸಗೊಂಡಿದ್ದಾರೆ ಎಂದರು.
ಜಿಲ್ಲಾ ವಕೀಲರ ಸಂದ ಉಪಾಧ್ಯಕ್ಷ ರವಿಗೌಡ ಮಾತನಾಡಿ, ಮರಳೂರು ಅಮಾನಿಕೆರೆ ಈ ಭಾಗದ ರೈತರಿಗೆ ಜೀನವಾಡಿ. ಕಳೆದ 30 ವರ್ಷಗಳಲ್ಲಿ 3ನೇ ಬಾರಿಗೆ ಕೆರೆ ತುಂಬಿರುವುದು ನಮ್ಮೆಲ್ಲರಿಗೂ ಹರ್ಷ ತಂದಿದೆ. ಈ ಕೆರೆಯಲ್ಲಿ ನೀರು ತುಂಬಿದ್ದರೆ ಅಂತರ್ಜಲಮಟ್ಟ ಹೆಚ್ಚಾಗಿ ರೈತರ ತೋಟ, ಜಮೀನುಗಳಿಗೆ ಬೋರ್ವೆಲ್ಗಳಿಂದ ನೀರು ಹರಿಸಲು ಅನುಕೂಲವಾಗುತ್ತದೆ ಎಂದರು.
ಮರಳೂರು ಕೆರೆಯನ್ನು ನಮ್ಮ ಪೂರ್ವಜರ ಕಾಲದಿಂದಲೂ ಸಂಪ್ರದಾಯ ಬದ್ಧವಾಗಿ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ. ಹಾಗೆಯೇ ಇಂದು ಸಹ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಗಿದೆ ಎಂದರು.
ಸಣ್ಣ ನೀರಾವರಿ ಇಲಾಖೆ ಇಇ ಮೂಡ್ಲಗಿರಿ, ಎಇಇ ತಿಪ್ಪೇಸ್ವಾಮಿ, ಸಂತೋಷ್, ಗ್ರಾಮಸ್ಥರಾದ ಕೃಷ್ಣಮೂರ್ತಿ, ಚಿಕ್ಕಣ್ಣಯ್ಯ, ರಾಮಣ್ಣ, ಮರಳೂರು ನಾಗರಾಜು, ಕೃಷ್ಣಪ್ಪ, ಭೀಮಣ್ಣ, ಅಶೋಕ್ ಕುಮಾರ್, ರಾಜು, ಕುಮಾರ್, ಸುರೇಶ್, ರವೀಶಯ್ಯ ಮತ್ತಿತರರು ಇದ್ದರು.
ತಡೆಗೋಡೆ ನಿರ್ಮಿಸಿಮಳೆಯಿಂದ ಮರಳೂರು ಕೆರೆ ತುಂಬುತ್ತಿರುವುದರಿಂದ ಕೆರೆಯ ಸ್ವಚ್ಛತೆ ಕಾಪಾಡಿ ತುಮಕೂರು ನಗರಕ್ಕೆ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಲಾಗುತ್ತಿದೆ. ಕೆರೆಯ ಏರಿ ಮೇಲೆ ಕುಣಿಗಲ್ ರಸ್ತೆ ಹೋದು ಹೋಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಡೆಗೋಡೆ ನಿರ್ಮಿಸಬೇಕು. ಕೆರೆಯ ಕೋಡಿ ಭಾಗದಲ್ಲಿ ಕಲ್ಯಾಣಿ ನಿಮಾರ್ಣ ಮಾಡಬೇಕು ಎಂದು ಎಂದು ಪಾಲಿಕೆ ಮಾಜಿ ಸದಸ್ಯ ಧರಣೇಂದ್ರಕುಮಾರ್ ಮನವಿ ಮಾಡಿದರು.