ಜಿಲ್ಲೆ

ಮಾತು ಕೊನೆಗೊಳಿಸಿದ ವಾಕ್ಪಟು, ಮಲ್ಪೆ ವಾಸುದೇವ ಸಾಮಗ ಇನ್ನು ನೆನಪು

ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ

ಹರಿದಾಸ ಮಲ್ಪೆ ಸಾಮಗರ ಮನೆತನ ಯಕ್ಷಗಾನದಲ್ಲಿ ಹೆಸರುವಾಸಿ. ರಾಮದಾಸ ಸಾಮಗರ ಪುತ್ರರಾಗಿರುವ ವಾಸುದೇವ ಸಾಮಗರು ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಕುಟುಂಬವೇ ಪ್ರೇರಣೆ.

21ನೇ ವಯಸ್ಸಿಗೆ ಯಕ್ಷಗಾನ ರಂಗ ಪ್ರವೇಶಿಸಿದ್ದು, ಉತ್ತರನ ಪೌರುಷ ಪ್ರಸಂಗದ ಉತ್ತರನ ಮೂಲಕ ಮನೆ ಮಾತಾದರು. ಉತ್ತರನ ಪೌರುಷ ಆಟಕ್ಕಿಲ್ಲದ ಪ್ರಸಂಗ ಎನ್ನುವ ಪಟ್ಟ ಕಳಚಿಹಾಕಿದ ಹೆಗ್ಗಳಿಕೆ ಸಾಮಗರದ್ದು. ಉತ್ತರನ ಪಾತ್ರದ ಮೂಲಕ ಮನೆಮಾತಾದ ಸಾಮಗರು, ಮಾತಿನ ಮೂಲಕವೂ ಪ್ರೇಕ್ಷಕರನ್ನು ಕಟ್ಟಿಕೂರಿಸಲು ಸಾಧ್ಯ ಎಂದು ತೋರಿಸಿಕೊಟ್ಟರು. ಸಾಮಗರಿಗಾಗಿ ಉತ್ತರನ ಪೌರುಷ ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗಾಗಿ ಕೀಚಕ ವಧೆ ಯಕ್ಷಗಾನ ಹೆಚ್ಚು ಪ್ರದರ್ಶನ ಕಾಣುವಂತಾಯಿತು.

ಸಣ್ಣ ಸಾಮಗ ಎಂದೇ ಹೆಸರು ಪಡೆದ ತಂದೆ ರಾಮದಾಸ ಸಾಮಗ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೋಟ ವೈಕುಂಠ, ಅರಾಟೆ ಮಂಜುನಾಥ, ಎಂ.ಎ.ನಾಯ್ಕ, ನಗರ ಜಗನ್ನಾಥ ಶೆಟ್ಟಿ ಮುಂತಾದ ಮೇರು ಕಲಾವಿದರ ಸಾಂಗತ್ಯ, ನಾರಣಪ್ಪ ಉಪ್ಪೂರು ಒಡನಾಟ ಯಕ್ಷಗಾನ ಕೇತ್ರದಲ್ಲಿ ಸಾಮಗ ತಮ್ಮದೇ ಮಾತುಗಾರಿಕೆ ಮೂಲಕ ಗುರುತಿಸಿಕೊಂಡಿದ್ದು, ತಾವು ರಂಗದಲ್ಲಿ ನಿರ್ವಹಿಸಿದ ಯಾವುದೇ ಪಾತ್ರವಾದರೂ ಅದಕ್ಕೆ ಸ್ಟಾರ್ ವ್ಯಾಲ್ಯೂ ಕೊಟ್ಟ ಹೆಗ್ಗಳಿಕೆ ಹೊಂದಿದ್ದರು.

‘ಯಕ್ಷಲೋಕ ವಿಜಯ ಪ್ರದೀಪ’ ಸಾಮಗರ ಸಾಮರ್ಥ್ಯ ತೆರೆದಿಟ್ಟಿದ್ದಲ್ಲದೆ, ಉತ್ತರನ ಮೂಲಕ ಮಾತಿನ ಮಲ್ಲ ಎನ್ನುವ ಬಿರುದು ಸಂಪಾದಿಸಿದರು. ಪ್ರದೀಪ ಪಾತ್ರ ಸಾಮಗರ ಮೇಲೆ ಎಷ್ಟು ಪರಿಣಾಮ ಬೀರಿತ್ತು ಎಂದರೆ ತಮ್ಮ ಪುತ್ರನಿಗೆ ಪ್ರದೀಪ ಎಂದು ನಾಮಕರಣ ಮಾಡಿದರು.

ಖ್ಯಾತ ಅರ್ಥದಾರಿಗಳಾದ ತಂದೆ ರಾಮದಾಸ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್ ಮುಂದೆ ಸಾಮಗರು ಪ್ರಬುದ್ಧ ಅರ್ಥಧಾರಿಯಾಗಿ ಗುರುತಿಸಿಕೊಂಡವರು. ಮಲ್ಪೆಯಿಂದ ತೀರ್ಥಹಳ್ಳಿ ಕಟ್ಟೆಹಕ್ಲಿಗೆ ವಾಸ್ತವ್ಯ ಬದಲಿಸಿದ ಸಾಮಗ ಕೆಲ ವರ್ಷದ ಹಿಂದೆ ಕೋಟೇಶ್ವರದಲ್ಲಿ ಬಂದು ನೆಲೆ ನಿಂತರು. ಸಂಯಮ (ಸಂಚಾರಿ ಯಕ್ಷಗಾನ ಮಂಡಳಿ) ಸಂಸ್ಥೆ ಹುಟ್ಟುಹಾಕಿ ಅದರ ಮೂಲಕ ಯಕ್ಷಗಾನ ತಾಳಮದ್ದಳೆ ತಂಡ ಕಟ್ಟಿ ಯಶಸ್ವಿ ತಿರುಗಾಟ ಮಾಡಿದ ಮೊದಲ ಕಲಾವಿದ ಸಾಮಗರು.

50 ಪ್ರಸಂಗಗಳ ಮುದ್ರಣದ ಕನಸು

ಆಸ್ಪತ್ರೆಗೆ ಹೋಗುವ ಕೊನೆಯ ಕ್ಷಣದವರೆಗೆ ಸಾಮಗರ ಕೈಯಲ್ಲಿ ಪೆನ್ನು ಇತ್ತು. ತಾಳಮದ್ದಳೆ ಕ್ಷೇತ್ರದಲ್ಲಿ ಅನೇಕರನ್ನು ರಂಗಕ್ಕೆ ಪರಿಚಯಿಸಿದ ಸಾಮಗರು ಮುಂದಿನ ಹೊಸ ತಲೆಮಾರಿಗಾಗಿ 50 ಪ್ರಸಂಗಗಳನ್ನು ಅರ್ಥ ಸಹಿತ ಬರೆದು ಮುದ್ರಣ ಮಾಡುವ ಕನಸು ಕಂಡಿದ್ದರು. ಅರ್ಧದಷ್ಟು ಕೆಲಸ ಮಾಡಿದ್ದು, ಪುಸ್ತಕ ಮತ್ತು ಪೆನ್ನನ್ನು ಜತೆಯಲ್ಲೇ ಇಟ್ಟುಕೊಂಡಿರುತ್ತಿದ್ದರು. ಸಮಯ ಸಿಕ್ಕಾಗಲೆಲ್ಲಾ ಪುಸ್ತಕದಲ್ಲಿ ಬರೆಯುತ್ತಿದ್ದರು. ಅರ್ಧದಷ್ಟು ಟೈಪಿಂಗ್ ಕೆಲಸವೂ ಆಗಿತ್ತು. ಯಾವ ಕೆಲಸಕ್ಕೆ ಕೈಹಾಕಿದರೂ ಅದನ್ನು ಮಗಿಸದೆ ಸಾಮಗರು ವಿರಮಿಸುತ್ತಿರಲಿಲ್ಲ. ಯಕ್ಷಗಾನಕ್ಕೆ ಅಪೂರ್ವ ಕೊಡುಗೆಯಾಗುವ ಸಾಧ್ಯತೆಯಿದ್ದ ಅರ್ಥ ಸಹಿತ ಪುಸ್ತಕವನ್ನು ಅರ್ಧಕ್ಕೇ ಬಿಟ್ಟು ಸಾಮಗರು ತೆರೆಮರೆಗೆ ಸರಿದಿರುವುದು ಯಕ್ಷಗಾನ ಕಲಾಕ್ಷೇತ್ರಕ್ಕೆ ಆಗಿರುವ ನಷ್ಟ.