ಜಿಲ್ಲೆ

ಸೈಂಟ್ ಮೇರಿಸ್ ಬೋಟ್ ಸೇವೆಗೆ 1.85 ಕೋಟಿ ರೂ. ಗುತ್ತಿಗೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈಗಾಗಲೇ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಪ್ರವಾಸಿಗರನ್ನು ಕರೆದೊಯ್ಯಲು ವಾರ್ಷಿಕ 1,85,00,000 ರೂ. ಟೆಂಡರ್ ಗುತ್ತಿಗೆ ನೀಡಲಾಗಿದೆ. ಮಳೆಗಾಲದ ನಂತರ ಪ್ರವಾಸೋದ್ಯಮ ಆರಂಭವಾದ ಮೊದಲ ದಿನವೇ 2,50,000 ರೂ. ಸಂಗ್ರಹವಾಗಿದೆ ಎಂದು ಜಿಲ್ಲಾಧಿಕಾರಿ ಡಾ ವಿದ್ಯಾಕುಮಾರಿ ತಿಳಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಂದಿನ ಮೂರು ವರ್ಷದ ಅವಧಿಯಗೆ ಟೆಂಡರ್ ನೀಡಲಾಗಿದ್ದು, ಪ್ರವಾಸಿಗರಿಂದ ಪಡೆಯುವ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಹಿಂದಿನ ಶುಲ್ಕವನ್ನು ಪಡೆಯಲು ಷರತ್ತಿನಲ್ಲಿ ಉಲ್ಲೇಖಿಸಿದ್ದೇವೆ. ಷರತ್ತುಗಳು ಉಲ್ಲಂಘಿಸಿದಲ್ಲಿ ಗುತ್ತಿಗೆ ರದ್ದು ಪಡಿಸಿ, ಮರು ಟೆಂಡರ್ ಮಾಡುವ ಹಕ್ಕನ್ನು ಜಿಲ್ಲಾಡಳಿತ ಕಾಯ್ದುಕೊಂಡಿದೆ ಎಂದರು. 

ಮಲ್ಪೆ ಬೀಚ್ ನ ಪಾರ್ಕಿಂಗ್ ಮತ್ತು ಆಹಾರ ಮಳಿಗೆಗಳ, ಗುತ್ತಿಗೆ ಅವಧಿ ಪೂರ್ಣಗೊಂಡಿಲ್ಲ. ಮತ್ತು ಪ್ರಸ್ತುತ ಗುತ್ತಿಗೆ ಪಡೆದವರು ಇಚ್ಚಿಸಿದಲ್ಲಿ ಎರಡು ವರ್ಷ ಗುತ್ತಿಗೆಯನ್ನು ವಿಸ್ತರಿಸುವಂತೆ ಷರತ್ತಿನಲ್ಲಿದೆ. ಹೀಗಾಗಿ ಅದರ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. 

ಮಲ್ಪೆ ಬೀಚ್ ನಲ್ಲಿ ಪ್ರವಾಸೋದ್ಯಮ ಚಟುವಟಿಕೆಯಿಂದ ಬರುವ ಆದಾಯದ ಶೇ. 50 ರಷ್ಟನು ಜಿಲ್ಲೆಯ ಇತರ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಬಳಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. 

ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್ ನಲ್ಲಿ ವಾರ್ಷಿಕ 40 ಲಕ್ಷ ರೂ ಆದಾಯವಿದ್ದು, ಅದು ಅಲ್ಲಿನ 35 ಸಿಬ್ಬಂದಿಗಳ ಸಂಬಳಕ್ಕೆ ಸರಿಯಾಗುತ್ತಿದೆ. ಈಗ ಅಲ್ಲಿನ ಪಾರ್ಕಿಂಗ್ ಗೆ ಹೊಸ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲಿ ಅಂತಿಮಗೊಳ್ಳಲಿದೆ. ಕುಂದಾಪುರದಲ್ಲಿ ಸ್ಕೂಬಾ ಡೈವ್ ಆರಂಭಿಸಲು ಅರ್ಜಿಗಳು ಬಂದಿವೆ. ತಜ್ಞರ ವರದಿ ಹಾಗು ತಾಂತ್ರಿಕ ವರದಿ ಪಡೆದು ಕ್ರಮ ಕೈಗೊಳ್ಳುತ್ತೇವೆ. ಪಡುಕರೆಯ ಆಸರೆ ಬೀಚ್ ನಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಟೆಂಡರ್ ಆಹ್ವಾನಿಸಿದ್ದೇವೆ ಎಂದರು. 

ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಉಪಸ್ಥಿತರಿದ್ದರು.