ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿ ಭಾಗದ ಸಮುದ್ರದಲ್ಲಿ ನಾಟಿಕಲ್ ಮೈಲ್ ವ್ಯಾಪ್ತಿ ವ್ಯತ್ಯಾಸದಿಂದಾಗಿ ಮೀನುಗಾರಿಕಾ ಚಟುವಟಿಕೆಯಲ್ಲಿನ ಸಮಸ್ಯೆ ಹಾಗೂ ದಂಡ ವಿಧಿಸುತ್ತಿರುವ ಗೊಂದಲವನ್ನು ಶ್ರೀ ಪರಿಹರಿಸಬೇಕು ಎಂದು ಗೋವಾ ಮೀನುಗಾರಿಕಾ ಸಚಿವ ನೀಲಕಂಠ ಹರ್ಲನಕರ್ ಅವರಿಗೆ ಶಾಸಕ ಯಶ್ಪಾಲ್ ಸುವರ್ಣ ಒತ್ತಾಯಿಸಿದರು.
ಮಲ್ಪೆ ಮೀನುಗಾರರ ಸಂಘದ ನಿಯೋಗದೊಂದಿಗೆ ಗುರುವಾರ ಗೋವಾಕ್ಕೆ ತೆರಳಿ ಅಲ್ಲಿನ ಮೀನುಗಾರಿಕಾ ಸಚಿವಾಲಯದಲ್ಲಿ ತುರ್ತು ಸಭೆ ನಡೆಸಿ ಮಾತನಾಡಿದರು.
ನಮ್ಮ ಭಾಗದ ಮೀನುಗಾರರು ಗೋವಾ ರಾಜ್ಯದ ಗಡಿಯಲ್ಲಿ ಮೀನುಗಾರಿಕೆ ಮಾಡುವಾಗ ಕೆಲವೊಮ್ಮೆ ನಾಟಿಕಲ್ ಮೈಲ್ ವ್ಯತ್ಯಾಸದಿಂದಾಗಿ ಅರಿವಿಲ್ಲದೆ ಗೋವಾ ವ್ಯಾಪ್ತಿಯಲ್ಲಿ ಮೀನುಗಾರಿಕೆ ಮಾಡಿದ್ದಿದೆ. ಆ ಕುರಿತು ಮಾಹಿತಿಯ ಕೊರತೆಯಿಂದ ಗೋವಾ ಪ್ರವೇಶಿಸಿದಾಗ ಬೋಟ್ ವಶಪಡಿಸಿಕೊಂಡು ಅನಗತ್ಯವಾಗಿ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ. ಇದರಿಂದ ಕರ್ನಾಟಕದ ಮೀನುಗಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಗೋವಾ ಸಚಿವರಿಗೆ ಯಶ್ಪಾಲ್ ಮನವರಿಕೆ ಮಾಡಿದರು.
ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮಾತನಾಡಿ, ರಾಜ್ಯದಿಂದ ರಾಜ್ಯಕ್ಕೆ ಮೀನುಗಾರಿಕಾ ನಿಯಮಗಳಲ್ಲಿ ವ್ಯತ್ಯಾಸವಿದೆ. ಹೀಗಾಗಿ ಕೇರಳ, ಗೋವಾ ರಾಜ್ಯದ ಮಧ್ಯದಲ್ಲಿರುವ ಕರ್ನಾಟಕದ ಮೀನುಗಾರರು ತೊಂದರೆ ಅನುಭವಿಸುವಂತಾಗಿದೆ ಎಂದರು.
ನಿಯೋಗದಲ್ಲಿ ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕಲ್ಲೇರ್, ಮಲ್ಪೆ ಯಾಂತ್ರಿಕ ಟ್ರಾಲ್ ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಉಪಾಧ್ಯಕ್ಷ ಪ್ರಕಾಶ್ ಬಂಗೇರ, ಮಲ್ಪೆ ಡೀಪ್ ಸೀ ಟ್ರಾಲ್ ಬೋಟ್ ಸಂಘದ ಅಧ್ಯಕ್ಷ ಸುಭಾಷ್ ಮೆಂಡನ್, 370 ಬೋಟ್ ಮೀನುಗಾರ ಸಂಘದ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಇತರರಿದ್ದರು.
ನಿಯೋಗದ ಮನವಿಗೆ ಸ್ಪಂದಿಸಿದ ಗೋವಾ ಮೀನುಗಾರಿಕಾ ಸಚಿವ ನೀಲಕಂಠ ಪ್ರತಿಕ್ರಿಯಿಸಿ, ಅಂತಾರಾಜ್ಯ ಮೀನುಗಾರಿಕೆಯ ಸಂದರ್ಭದಲ್ಲಿ ಅಂತಹ ಘಟನೆ ನಡೆದ ಬಗ್ಗೆ ಮಾಹಿತಿ ಇದೆ. ಈ ಎಲ್ಲ ಸಮಸ್ಯೆ, ಗೊಂದಲ ನಿವಾರಿಸಲು ದೇಶದ ಪಶ್ಚಿಮ ಕರಾವಳಿಗೆ ಏಕರೂಪ ಮೀನುಗಾರಿಕಾ ನೀತಿ ಜಾರಿಯಾದಲ್ಲಿ ಪರಿಹಾರ ಸಿಗಲಿದೆ. ಶೀಘ್ರದಲ್ಲಿಯೇ ಪಶ್ಚಿಮ ಕರಾವಳಿ ರಾಜ್ಯಗಳ ಮೀನುಗಾರಿಕಾ ಸಚಿವರ ಸಭೆ ನಡೆಸಿ ಕೇಂದ್ರ ಸರ್ಕಾರದ ಮೂಲಕ ಏಕರೂಪ ಮೀನುಗಾರಿಕಾ ನೀತಿ ಅನುಷ್ಠಾನಗೊಳಿಸಲು ಪ್ರಯತ್ನ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.