ಜಿಲ್ಲೆ

ಬ್ಲಾಗರ್ ಜೊತೆ ಮಲ್ಪೆ ಬೀಚ್ ಸಿಬ್ಬಂದಿ ಅನುಚಿತ ವರ್ತನೆ

ಉಡುಪಿ: ಮಲ್ಪೆಗೆ ಭೇಟಿ ನೀಡಿದ ಬ್ಲಾಗರ್ ಜೊತೆ ಸೈಂಟ್ ಮೇರಿಸ್ ಐಲ್ಯಾಂಡ್ ದ್ವೀಪದ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದ್ದು, ಕ್ಯಾಮರಾವನ್ನು ಕೌಂಟರ್‌ನಲ್ಲಿ ಇಟ್ಟು ಹೋಗುವ ವಿಚಾರದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

ಸಖತ್ ಕಂಟೆಂಟ್ಸ್ ಹೆಸರಿನಲ್ಲಿರುವ ಫೇಸ್‌ಬುಕ್ ಪೇಜ್ ಪ್ರವಾಸಿ ಬ್ಲಾಗರ್ ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ತೆರಳಲು ಬೈಕ್ ನಲ್ಲಿ ಆಗಮಿಸಿದ್ದರು. ಮಲ್ಪೆ ಸೀ ವಾಕ್ ಬಳಿಯ ಬೈಕ್ ಪಾರ್ಕಿಂಗ್‌ಗೆ ಶುಲ್ಕವನ್ನು ಕಟ್ಟಿದ್ದಾರೆ. ಪಾರ್ಕಿಂಗ್ ಶುಲ್ಕ ಪಡೆದ ಸಿಬ್ಬಂದಿ ಬ್ಲಾಗರ್ ಬಳಿ ಕ್ಯಾಮರಾ ತೆಗೆದುಕೊಂಡು ಹೋಗಲು 100 ರೂ. ವಸೂಲಿ ಮಾಡಿದ್ದು, ರಶೀದಿ ಅಗತ್ಯವಿಲ್ಲವೆಂದು ಕಳುಹಿಸಿಕೊಟ್ಟಿದ್ದಾರೆ. ನಂತರ ಸೈಂಟ್ ಮೇರಿಸ್ ದ್ವೀಪದಲ್ಲಿ ಟಿಕೇಟ್ ಕೌಂಟರ್‌ನಲ್ಲಿ ಮತ್ತೆ ಕ್ಯಾಮರಾ ಶುಲ್ಕ ಕೇಳಿದ್ದಾರೆ. ಈ ಹಿಂದೆ ಹಣ ಪಾವತಿಸಿದ್ದೇನೆ ಎಂದು ಬ್ಲಾಗರ್ ತಿಳಿಸಿದ್ದು, ಕೌಂಟರ್ ಸಿಬ್ಬಂದಿ ಇಲ್ಲೇ ಹಣ ಪಾವತಿಸಿ, ಇಲ್ಲದಿದ್ದರೆ ಕ್ಯಾಮರ್ ಇಟ್ಟು ಹೋಗಿ ಎಂದು ಹೇಳಿದ್ದಾರೆ. ಡೋರ್ ಲಾಕರ್ ಇಲ್ಲ ಹೀಗಾಗಿ ಲಕ್ಷಾಂತರ ರೂ. ಬೆಳೆಬಾಳುವ ಕ್ಯಾಮರಾ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಬ್ಲಾಗರ್ ಮಾರುತ್ತರ ನೀಡುತ್ತಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಬ್ಲಾಗರ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಕಿಂಗ್ ಪ್ರದೇಶದಲ್ಲಿದ್ದ ವ್ಯಕ್ತಿಗೆ ಕ್ಯಾಮರಾಕ್ಕೆ ಹಣ ತೆಗೆದುಕೊಳ್ಳಲು ಅಧಿಕಾರ ನೀಡಿದವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಜಿಲ್ಲಾಡಳಿತ ಪ್ರವಾಸಿಗರಿಂದ ಸುಂಕ ವಸೂಲಿ ಜವಾಬ್ದಾರಿಯನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡಿದ್ದು, ಸಿಬ್ಬಂದಿ ದರ್ಪ ಮತ್ತು ಗೂಂಡಾಗಿರಿಯ ವರ್ತನೆಯಿಂದ ಪ್ರವಾಸಿಗರಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಎಲ್ಲೆಡೆ ವಸೂಲಿ
ದೇಶ ವಿದೇಶಗಳಿಂದ ಮಲ್ಪೆ ಕಡಲತೀರ, ಸೈಂಟ್ ಮೇರಿಸ್ ಐಲ್ಯಾಂಡ್ ವೀಕ್ಷಿಸಲು ಸಾವಿರಾರು ಪ್ರವಾಸಿಗರು, ಬ್ಲಾಗರ್ಸ್‌ಗಳು ಆಗಮಿಸುತ್ತಾರೆ. ಮಲ್ಪೆ ಬೀಚ್ ಪ್ರವೇಶಿಸುವ ಸ್ವಾಗತ ಕಮಾನು ಬಳಿಯೇ ಹಣ ಕೇಳುತ್ತಾರೆ. ಸಾರ್ವಜನಿಕ ರಸ್ತೆಯಲ್ಲಿ ಓಡಾಡಲು ಸುಂಕ ರೂಪದಲ್ಲಿ ಹಣ ಕೊಡಬೇಕೇ ಎಂಬುದಾಗಿ ಕೆಲ ಪ್ರವಾಸಿಗರು ಪ್ರಶ್ನೆ ಮಾಡುತ್ತಿದ್ದಾರೆ. ನಂತರ ಪಾರ್ಕಿಂಗ್‌ನಲ್ಲಿ ಮತ್ತೆ ಹಣ ಕೊಡಬೇಕು. ಹೀಗೆ ಮಲ್ಪೆ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಪಾರ್ಕಿಂಗ್ ಹಣ ನೀಡಬೇಕು.

ಜಿಲ್ಲಾಧಿಕಾರಿ ಕೂರ್ಮಾ ರಾವ್ ಪ್ರತಿಕ್ರಿಯಿಸಿ, ಮಲ್ಪೆಯಲ್ಲಿ ಪ್ರವಾಸಿಗರೊಬ್ಬರಿಂದ ಕ್ಯಾಮೆರಾಕ್ಕೆ ಪಾರ್ಕಿಂಗ್‌ನಲ್ಲಿ ಶುಲ್ಕ ಪಡೆದು, ನಂತರ ಐಲ್ಯಾಂಡ್‌ನಲ್ಲಿಯೂ ಶುಲ್ಕಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಈ ಬಗ್ಗೆ ಸಮಗ್ರ ವರದಿ ನೀಡಲು ನಗರಸಭೆ ಕಮೀಷನರ್‌ಗೆ ಸೂಚಿಸಿದ್ದೇನೆ. ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.