ಜಿಲ್ಲೆ

ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ವಿತರಣಾ ತೊಟ್ಟಿ ಕಾಮಗಾರಿಗೆ ಭೂಮಿ ಪೂಜೆ

reportermys

ಅರಕಲಗೂಡು: ತಾಲೂಕಿನ ಮುಸವತ್ತೂರು- ಹೊಳಲಗೋಡು ಬಳಿ ೧೯೦ ಕೋಟಿ ರೂ ವೆಚ್ಚದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ನೀರು ವಿತರಣಾ ತೊಟ್ಟಿ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಟಿ. ರಾಮಸ್ವಾಮಿ ಶನಿವಾರ ಭೂಮಿಪೂಜೆ ನೆರವೇರಿಸಿದರು.

ನಂತರ ನಡೆದ ಸಮಾರಂಭದ‌ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಇದು ನನ್ನ ದಶಕಗಳ ಕನಸಿನ ನೀರಾವರಿ ಯೋಜನೆ. ಮಹತ್ವಾಕಾಂಕ್ಷೆಯ ಈ ಯೋಜನೆಯ ಮೂಲಕ ೨೦೦ ಕೆರೆ ಕಟ್ಟೆಗಳಿಗೆ ನೀರು ತುಂಬಿ ಸಾವಿರಾರು ಎಕರೆ ಜಮೀನಿಗೆ ನೀರು ಹರಿದು ರೈತರ ಬದುಕು ಹಸನಾಗಲಿದೆ, ಪೈಪ್ ಅಳವಡಿಕೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಹಾಗೂ ಮರ, ಬೆಳೆ ಕಳೆದುಕೊಂಡವರಿಗೆ ಪರಿಹಾರ ಸಿಗಲಿದೆ. ಯೋಜನೆಯ ಸಾಕಾರಕ್ಕೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್- ೧೯ ಸಂಕಷ್ಟದ ಸಮಯದಲ್ಲಿ ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯದೆ ನನ್ನ ಹಿತ ಬಲಿಕೊಟ್ಟು ಜ‌ನರ ಏಳಿಗೆಗಾಗಿ ಅಭಿವೃದ್ಧಿ ಕೆಲಸಗಳನ್ನು ಕಾರ್ಯಗತಗೊಳಿಸಲು ಹಗಲಿರುಳು ಶ್ರಮಿಸುತ್ತಿರುವೆ, ಸ್ವಾರ್ಥಕ್ಕಾಗಿ ಗಿಮಿಕ್ ರಾಜಕಾರಣ ಮಾಡುವ ಜಾಯಮಾನ ನನ್ನದಲ್ಲ. ಸಾಧನೆಗಳ ಮೂಲಕ ಸಾಬೀತು ಪಡಿಸುತ್ತಿರುವೆ, ಎಲ್ಲೆಡೆ ಕರೊನಾ ಕಂಟಕದಿಂದ ಕೆಲಸಗಳು ಸ್ಥಗಿತಗೊಡಿದ್ದರೆ, ನನ್ನ ಕ್ಷೇತ್ರದಲ್ಲಿ ಮಾತ್ರ ಸಾವಿರಾರು ಕೋಟಿ ರೂ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿಸಿ ಚಾಲನೆ ನೀಡಿದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳದಂತೆ ಸದಾ ನಿಗಾ ವಹಿಸಿರುವೆ.

ಶರವೇಗದಲ್ಲಿ ಸಾಗಿದ್ದ ಏತ ನೀರಾವರಿ ಯೋಜನೆ ಕಾಮಗಾರಿ ವೇಗಕ್ಕೆ ಕರೋನಾ ಅಡ್ಡಿಯಾಗಿ ಕಾರ್ಮಿಕರ ಕೊರತೆ ಕಾಡಿದರೂ ೪೪ ಕೋಟಿ ರೂ ವೆಚ್ಚದ ಕಾಮಗಾರಿ ನಡೆಸಲಾಗಿದೆ. ಈ ಭಾಗದ ರೈತರು ಕೇಳದಿದ್ದರೂ ನನ್ನ ಹೋರಾಟ ಮತ್ತು ಶ್ರಮದಿಂದ ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ಯೋಜನೆ ಮಂಜೂರು ಮಾಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರತಿನಿತ್ಯ ಕಾಮಗಾರಿ ಪ್ರಗತಿ ಪರಿಶೀಲಿಸಲಾಗುತ್ತಿದೆ. ಇಂಜಿನಿಯರ್ ಗಳು ಮತ್ತು ಗುತ್ತಿಗೆದಾರರು ಬಹುಬೇಗ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಶಾಶ್ವತವಾದ ಈ ಯೋಜನೆಯ ಫಲ ರೈತರಿಗೆ ಧಕ್ಕುವಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಕುಶಾಲನಗರ ಹಾರಂಗಿ ಜಲಾಶಯ ಯೋಜನೆ ಕಾರ್ಯಪಾಲಕ ಇಂಜಿನಿಯರ್ ರಾಜೇಗೌಡ ಮಾತನಾಡಿ, ಯೋಜನೆ ಸಾಕಾರಕ್ಕೆ ಶಾಸಕರು ವಹಿಸುರುವ ಆಸಕ್ತಿ ಹಾಗೂ ನೀರಾರಿಯಿಂದ ಪ್ರಯೋಜನ ಕುರಿತು ವಿವರಿಸಿದರು.

ಸಹಾಯಕ ಕಾರ್ಯಪಾಲಕ ಇಂಜಿನಿರ್ ತಿಮ್ಮಪ್ಪ, ರೈತರು ಇದ್ದರು.