ಸಾಂದರ್ಭಿಕ ಚಿತ್ರ 
ಜಿಲ್ಲೆ

ಮಲ್ಲಿಕಟ್ಟೆ ಶಟರ್ ಬೀಗ ಮುರಿದು ಮಳಿಗೆಯಿಂದ 28 ಸಾವಿರ ರೂ. ಕಳವು

ಮಂಗಳೂರು: ಕದ್ರಿ ಮಲ್ಲಿಕಟ್ಟೆಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಾರ್ಯಾಚರಿಸುತ್ತಿರುವ ಸ್ಟಾರ್ಟ್ ಟೆಕ್ ಸೊಲ್ಯೂಷನ್ಸ್ ಎಂಬ ಹೆಸರಿನ ಕಂಪ್ಯೂಟರ್ ಸೇಲ್ಸ್ ಮತ್ತು ರಿಪೇರಿ ಮಳಿಗೆಯಿಂದ 28 ಸಾವಿರ ರೂ. ನಗದು ಕಳವು ಮಾಡಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿ ಮಾಲೀಕ ರಜನೀಶ್ ಕೆ. ಅವರು ಮೇ 30ರಂದು ರಾತ್ರಿ 11.30ಕ್ಕೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ಜೂ.1ರಂದು ಬೆಳಗ್ಗೆ 8.45ಕ್ಕೆ ಅವರ ಸಹಾಯಕ ಪೂಜಿತ್ ಎಂಬವರು ಅಂಗಡಿ ತೆರೆಯಲೆಂದು ಬಂದಾಗ ಶಟರ್ ಬೀಗ ಮುರಿದಿರುವುದು ಕಂಡು ಬಂದಿದೆ. ಈ ಬಗ್ಗೆ ಕರೆ ಮಾಡಿ ರಜನೀಶ್ ಅವರಿಗೆ ತಿಳಿಸಿದ್ದಾರೆ. ಅವರು ಅಂಗಡಿಗೆ ಬಂದು ನೋಡಿದಾಗ ಒಂದು ಡ್ರಾಯರ್ ನಲ್ಲಿ ಇಟ್ಟಿದ್ದ 8 ಸಾವಿರ, ಇನ್ನೊಂದು ಡ್ರಾಯರ್ ನಲ್ಲಿ ಇಟ್ಟಿದ್ದ 15 ಸಾವಿರ ರೂ. ಹಾಗೂ ದೇವರ ಕಾಣಕೆ ಡಬ್ಬಿಯಲ್ಲಿ ಇಟ್ಟಿದ್ದ 5 ಸಾವಿರ ರೂ. ಹೀಗೆ ಒಟ್ಟು 28 ಸಾವಿರ ರೂ. ಕಳವಾಗಿರುವುದು ಕಂಡು ಬಂದಿದೆ.
ಕಳ್ಳರು ಪಕ್ಕದ ಇನ್ನೆರಡು ಅಂಗಡಿಗಳ ಶಟರ್ ಬೀಗ ಮುರಿದು ಕಳವು ಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.