ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಮಕ್ಕಳಿಗೆ ಪಾಠದ ಜತೆಗೆ ಆಟವೂ ಅತಿ ಮುಖ್ಯ ಎಂಬ ಮಾತಿನಂತೆ ತಾಲೂಕಿನ ಕೆ.ಮಲ್ಲಸಂದ್ರದ ಸರ್ಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಹಲವು ಸಮಸ್ಯೆ ನಡುವೆಯೂ ಹೋಬಳಿಮಟ್ಟದ ಕ್ರೀಡಾಕೂಟದಲ್ಲಿ ಸಾಧಿಸಿ ಗಮನ ಸೆಳೆದಿದ್ದಾರೆ.
ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾದರೆ ಶೈಕ್ಷಣಿಕ ಪ್ರಗತಿ ಜತೆಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಸಾಧ್ಯ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಅಂತೆಯೇ, ಕೆ.ಮಲ್ಲಸಂದ್ರದ ಸರ್ಕಾರಿ ಶಾಲೆ ಮಕ್ಕಳಿಗೆ ಕ್ರೀಡಾಂಗಣ ಇಲ್ಲದಿದ್ದರೂ ಶಾಲೆಯ ಪಕ್ಕದ ಖಾಸಗಿ ಜಾಗ ಸ್ವಚ್ಛಗೊಳಿಸಿ ಕ್ರೀಡಾಂಗಣದ ರೀತಿ ತಯಾರಿ ಮಾಡಿಕೊಂಡು ಅಭ್ಯಾಸ ಮಾಡಿ ಹೋಬಳಿಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ಮಕ್ಕಳ ಸಾಧನೆಗೆ ಶಾಲಾ ಶಿಕ್ಷಕ ವರ್ಗ, ಪಾಲಕರು ಸಂತಸಪಟ್ಟಿದ್ದಾರೆ. ಆದರೆ, ಮಕ್ಕಳಿಗೆ ಆಟದ ಮೈದಾನ ಇದ್ದಿದ್ದರೆ ಇನ್ನೂ ಹೆಚ್ಚಿನ ಸ್ಪರ್ಧೆಯಲ್ಲಿ ವಿಜೇತರಾಗುತ್ತಿದ್ದರು. ಶಾಲೆಗೆ ಕ್ರೀಡಾಂಗಣ ನಿರ್ಮಿಸಿಕೊಡಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲಿನ ಮನವಿಯಾಗಿದೆ.
ತಾಲೂಕುಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಗಂಡು ಮಕ್ಕಳ ಖೋಖೋ ಸ್ಪರ್ಧೆಯಲ್ಲಿ ಪ್ರಥಮ, ಕಬಡ್ಡಿಯಲ್ಲಿ ಗಂಡು ಮಕ್ಕಳ ವಿಭಾಗದಲ್ಲಿ ಪ್ರಥಮ, ಪ್ರಾಥಮಿಕ ಶಾಲಾ ಹೆಣ್ಣು ಮಕ್ಕಳ ವಿಭಾಗದಲ್ಲಿ ಖೋಖೋ ಪಂದ್ಯದಲ್ಲಿ ದ್ವಿತೀಯ, 100 ಮೀಟರ್ ಓಟ ಹಾಗೂ ಉದ್ದ ಜಿಗಿತದಲ್ಲಿ ರಾಹುಲ್ ಚೌಧರಿ ಪ್ರಥಮ, ಕಿರ್ಪಾನಂದ್ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಡಿಸ್ಕಸ್ ಥ್ರೋನಲ್ಲಿ ದ್ವಿತೀಯ, ಗುಂಡು ಎಸೆತದಲ್ಲಿ ವಿಠ್ಠಲ್ ಪ್ರಥಮ ಸ್ಥಾನ ಪಡೆದಿದ್ದಾರೆ.