ನರಗುಂದ: ಸಾಮಾಜಿಕ, ಶೈಕ್ಷಣಿಕ, ಧಾರ್ವಿುಕ ಹಾಗೂ ರಾಜಕೀಯವಾಗಿ ಮಾಡಿದ ಸೇವೆ ಅಪೂರ್ವವಾದುದು. ಸೊಲ್ಲಾಪುರ ಜನತೆಯಿಂದ ಮಹಾರಾಜ ಎಂದು ಕರೆಯಿಸಿಕೊಂಡ ವಾರದ ಮಲ್ಲಪ್ಪನವರು, ಸಾವಿರಾರು ಬಡ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟು ಅವರ ಬಾಳಿಗೆ ಬೆಳಕಾಗಿದ್ದರು ಎಂದು ವಿಶ್ರಾಂತ ಉಪನ್ಯಾಸಕ ಎಚ್.ಎ. ಮುದಿಯಪ್ಪನವರ ಬಣ್ಣಿಸಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 349ನೇ ಮಾಸಿಕ ಶಿವಾನುಭವ ಹಾಗೂ ಚೆಂಬೆಳಕು ಚೆಲ್ಲಿದವರು ಉಪನ್ಯಾಸ ಮಾಲಿಕೆಯ 14ನೇ ದಿನದ ಕಾರ್ಯಕ್ರಮದಲ್ಲಿ ವಾರದ ಮಲ್ಲಪ್ಪನವರ ಕುರಿತು ಉಪನ್ಯಾಸ ನೀಡಿದರು.
ಶಾಂತಲಿಂಗ ಶ್ರೀಗಳು ಮಾತನಾಡಿ, ಬಡಜನರ ಮಕ್ಕಳ ವಿದ್ಯಾರ್ಜನೆಗೆ ಅನುಕೂಲ ಕಲ್ಪಿಸುವುದರ ಜತೆಗೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ ವಾರದ ಮಲ್ಲಪ್ಪವರು. ಲಿಂಗಾಯತರ ಯುಗಪುರುಷ. ದೇಶದಲ್ಲಿಯೇ ಅತೀ ದೊಡ್ಡ ರೈತರಾಗಿದ್ದ ವಾರದ ಮಲ್ಲಪ್ಪನವರ ಧಾರ್ವಿುಕ ನಿಷ್ಠೆ ಎಲ್ಲರಿಗೂ ಆದರ್ಶಪ್ರಾಯವಾದುದು ಎಂದರು.
1967ರಲ್ಲಿ ಬೀಕರ ಬರಗಾಲದ ಸಮಯದಲ್ಲಿ ತಮ್ಮ ಬಂಗಲೆ, ಕಾರ್ಖಾನೆ, ಅತಿಥಿ ಗೃಹಗಳನ್ನು ನಿರ್ಗತಿಕರ ಆಶ್ರಯ ತಾಣವನ್ನಾಗಿ ಪರಿವರ್ತಿಸಿ ಅವರಿಗೆ ಆಹಾರ ಪೂರೈಸಿದ ಉದಾರಿಗಳು ಎಂದು ತಿಳಿಸಿದರು.
ನರಗುಂದದ ಖ್ಯಾತ ವೈದ್ಯ ಡಾ. ಎ.ಐ. ಹುಯಿಲಗೋಳ, ಯಾವಗಲ್, ಕಣಕೀಕೊಪ್ಪ, ಅಳಗವಾಡಿ ಹಾಗೂ ಶಿರೋಳ ಗ್ರಾಪಂ ಅಧ್ಯಕ್ಷರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.
ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಮಹಾಂತೇಶ ಸಾಲಿಮಠ ಮಾತನಾಡಿದರು. ಕಸಾಪ ನಿಕಟಪೂರ್ವ ಅಧ್ಯಕ್ಷೆ ಮಂಗಳಾ ಪಾಟೀಲ, ಜೀವ ವಿಮಾ ಪ್ರತಿನಿಧಿ ಬಿ.ಎಂ. ಗೊಜನೂರ, ಶಂಕ್ರಣ್ಣ ವಾಳದ, ಚಂಬಣ್ಣ ಕೋರಿ, ಪ್ರೊ. ಪಿ.ಎಸ್. ಅಣ್ಣಿಗೇರಿ, ಬಿ.ಎಚ್. ಕ್ಯಾರಕೊಪ್ಪ, ಪ್ರೊ. ಆರ್.ಎಚ್. ತಿಗಡಿ ಉಪಸ್ಥಿತರಿದ್ದರು. ಪ್ರೊ. ಆರ್.ಬಿ. ಚಿನಿವಾಲರ, ಪ್ರೊ. ಆರ್.ಕೆ. ಐನಾಪೂರ, ಮಹಾಂತೇಶ ಹಿರೇಮಠ ನಿರ್ವಹಿಸಿದರು.