ಜಿಲ್ಲೆ

ಚಾಮುಂಡಿಬೆಟ್ಟಕ್ಕೆ ಬೆಂಕಿ ಬಿದ್ದರೂ ಬೆಂಕಿನಂದಿಸಲು ನೀರು ನೀಡದ ಮಾಲ್ ಆಫ್ ಮೈಸೂರು: ಕಾರಣ ಕೇಳಿ ಜಿಲ್ಲಾಧಿಕಾರಿ ನೋಟಿಸ್ ಜಾರಿ

ಮೈಸೂರು: ಚಾಮುಂಡಿಬೆಟ್ಟದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ನಂದಿಸಲು ನೀರು ನೀಡಲು ನಿರಾಕರಿಸಿದ ಮಾಲ್ ಆಫ್ ಮೈಸೂರಿಗೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಗುರುವಾರ ಕಾರಣಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಫೆ.21 ರಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳು ಮಾಲ್ ಆಫ್ ಮೈಸೂರು ಅವರ ಬಳಿ ಮನವಿ ಮಾಡಿಕೊಂಡಿದ್ದರು. ಮಾಲ್ ಆಫ್ ಮೈಸೂರಿನಲ್ಲಿ ಶೇಖರಿಸಿದ್ದ ನೀರನ್ನು 2 ಜಲವಾಹನಗಳಿಗೆ ತುಂಬಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಕೋರಿಕೊಳ್ಳಲಾಗಿತ್ತು. ಆದರೆ, ಮಾಲ್‌ನವರು ನೀರು ನೀರು ನೀಡಲು ನಿರಾಕರಿಸಿದ್ದರು. ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರೂ ನಿರ್ದೇಶನವನ್ನು ಮಾಲ್‌ನವರು ಪಾಲನೆ ಮಾಡಲಿಲ್ಲ.

ವಿಪತ್ತು ನಿರ್ವಹಣ ಕಾಯ್ದೆ ಪ್ರಕಾರ ವಿಪತ್ತು ಸಂದರ್ಭಗಳಲ್ಲಿ ಯಾವುದೇ ಪ್ರಾಧಿಕಾರ, ವ್ಯಕ್ತಿ ಬಳಿ ಲಭ್ಯವಿರುವ ಸಂಪನ್ಮೂಲಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಮಾಲ್‌ನವರು ನೀರನ್ನು ಬಳಸಿಕೊಳ್ಳಲು ಅವಕಾಶ ನೀಡದೆ ಇರುವುದು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ನೀರು ಸಕಾಲದಲ್ಲಿ ದೊರೆಯದ ಹಿನ್ನೆಲೆಯಲ್ಲಿ ಬೆಂಕಿ ನಂದಿಸುವ ಕಾರ್ಯ ವಿಳಂಬಾಯಿತು. ಹೀಗಾಗಿ ಮೂರು ದಿನಗಳ ಒಳಗೆ ನೋಟಿಸ್‌ಗೆ ಮಾಲ್‌ನವರು ಉತ್ತರಿಸಬೇಕು. ಇಲ್ಲವಾದಲ್ಲಿ ಕಾಯ್ದೆಯಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿಎಚ್ಚರಿಕೆ ನೀಡಲಾಗಿದೆ.