ಮಳಖೇಡ: ಹನ್ನೆರಡನೇ ಶತಮಾನದ ಶರಣರು ತಮ್ಮ ಅಮೂಲ್ಯ ವಚನ ಸಾಹಿತ್ಯದೊಂದಿಗೆ ಮಾನವರಲ್ಲಿ ಸಮಾನತೆ, ಮಾನವೀಯ ಮೌಲ್ಯಗಳನ್ನು ಬಿತ್ತಿದ್ದಾರೆ. ಅವರ ತತ್ವಾದರ್ಶಗಳು ನಮಗೆಲ್ಲ ಮಾದರಿ ಎಂದು ಶ್ರೀ ಸಿದ್ದರಾಮ ಶರಣರು ಬೆಲ್ದಾಳ ನುಡಿದರು.
ಬಿಜನಳ್ಳಿ ಗ್ರಾಮದಲ್ಲಿ ಶಿವಶರಣ ಹರಳಯ್ಯ ದಂಪತಿ ವಿಶ್ವಗುರು ಬಸವಣ್ಣನವರಿಗೆ ಅರ್ಪಿಸಿದ ಚಮ್ಮಾವುಗೆಗಳ ಜೀರ್ಣೋದ್ಧಾರ ಸಮಿತಿ ಹಾಗೂ ಜಿಲ್ಲಾ ಹರಳಯ್ಯ ಸಮಾಜ ಸಹಯೋಗದಡಿ ಸೋಮವಾರ ಆಯೋಜಿಸಿದ್ದ ಶ್ರೀ ಶಿವಶರಣ ಹರಳಯ್ಯ ಸ್ಮರಣೋತ್ಸವ ಮತ್ತು ಹರಳಯ್ಯ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ತೊಡೆಯ ಚರ್ಮದಿಂದ ಪಾದುಕೆಗಳನ್ನು ಮಾಡಿ ಭಕ್ತಿಪೂರ್ವಕವಾಗಿ ಬಸವಣ್ಣನವರಿಗೆ ಅರ್ಪಿಸಿದ ಮಹಾನ್ ಶರಣ ಹರಳಯ್ಯನವರ ತ್ಯಾಗ, ಮನೋಭಾವ ಶ್ರೇಷ್ಠವಾದದ್ದು. ಸಮಾನತೆ, ಸಾಮರಸ್ಯ, ಶಾಂತಿ ಶರಣರ ಗುರಿಯಾಗಿದ್ದು, ಸಮಾನತೆಯಿಂದ ಸಮಾಜದಲ್ಲಿ ಶಾಂತಿ ಲಭಿಸಲು ಸಾಧ್ಯ ಎಂದರು.
ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ದರ್ಗಾದ ಹಜರತ್ ಸೈಯದ್ ಶಾ ಮುಸ್ತಫಾ ಖಾದ್ರಿ, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಗ್ರಾಪಂ ಅಧ್ಯಕ್ಷ ಚನ್ನಯ್ಯ ಪುರಾಣಿಕ, ಚಮ್ಮಾವುಗೆಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಹರಳಯ್ಯ ಸಮಾಜ ಜಿಲ್ಲಾಧ್ಯಕ್ಷ ಕಾಶೀರಾಯ ನಂದೂರಕರ, ಪ್ರಮುಖರಾದ ರವೀಂದ್ರ ಶಾಬಾದಿ, ಸುಭಾಷ ವಾಲಿ, ಬಸವರಾಜ ಮಾಲಿಪಾಟೀಲ್, ಗುಂಡೇರಾವ ಮುಡಬಿ, ಡಾ.ಅಂಬಾರಾಯ ರುದ್ರವಾಡಿ, ಎಸ್.ಪಿ. ಸುಳ್ಳದ, ಕಲ್ಯಾಣರಾವ ತೊನಸನಹಳ್ಳಿ, ದೇವಿಂದ್ರಪ್ಪ ಮಾಲಿಪಾಟೀಲ್, ಬಸವರಾಜ ಸೊಲಬ ಇತರರಿದ್ದರು.
ಸಮಿತಿ ಕಾರ್ಯದರ್ಶಿ ಸಿದ್ದಣ್ಣ ಯಕ್ಮಾಯಿ ಸ್ವಾಗತಿಸಿದರು. ಮಂಜುನಾಥ ರಾಜೆ ನಿರೂಪಣೆ ಮಾಡಿದರು. ವೀರಭದ್ರಪ್ಪ ಹೆಬ್ಬಾಳ ವಂದಿಸಿದರು. ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಅವರಿಗೆ ಹರಳಯ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಿಜನಳ್ಳಿ ಅಭಿವೃದ್ಧಿಗಾಗಿ ೧೦ ಲಕ್ಷ ರೂ. ಅನುದಾನ ನೀಡಲಾಗುವುದು. ಅಲ್ಲದೇ ಈ ಕ್ಷೇತ್ರದ ಸಮಗ್ರ ಪ್ರಗತಿ ಮತ್ತು ಧಾರ್ಮಿಕ ಪ್ರವಾಸಿ ತಾಣವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.
| ಡಾ.ಬಿ.ಜಿ.ಪಾಟೀಲ್ ವಿಧಾನ ಪರಿಷತ್ ಸದಸ್ಯ
ಬಸವಕಲ್ಯಾಣ ಮಾದರಿಯಲ್ಲಿ ಬಿಜನಳ್ಳಿ ಅಭಿವೃದ್ಧಿ ಹೊಂದಬೇಕು. ಸರ್ಕಾರ ಈ ಕ್ಷೇತ್ರದ ಪ್ರಗತಿಗೆ ಪ್ರಾಧಿಕಾರ ರಚನೆ ಮಾಡಬೇಕು. ಆರ್ಥಿಕ ಸಹಾಯ ನೀಡುವುದರ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
| ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ