ಕುಪ್ಪಳಿಯಲ್ಲಿ ಆರಗ ಜ್ಞಾನೇಂದ್ರ ಅವರು ಟಿ.ಎಸ್.ಮಂಜುನಾಥ ವಿರಚಿತ ಭಾವಜೀವಿಯ ಭಾವಬಂಧ ಕೃತಿಯನ್ನು ಬಿಡುಗಡೆಗೊಳಿಸಿದರು. ಡಾ. ಮಹೇಶ್ ಜೋಷಿ, ಎಂ.ಆರ್.ವೆಂಕಟೇಶ್, ವಿಜಯಲಕ್ಷ್ಮೀ ಇತರರಿದ್ದರು. 
ಜಿಲ್ಲೆ

ಕುವೆಂಪು ಕೃತಿಗಳಲ್ಲಿ ಮಲೆನಾಡ ಸಂಸ್ಕೃತಿ ಜೀವಂತ

ತೀರ್ಥಹಳ್ಳಿ: ಮಲೆನಾಡಿನ ಪರಿಸರ, ಸಾಂಸ್ಕೃತಿಕ ಪರಂಪರೆ ಮತ್ತು ಜನಜೀವನವನ್ನು ತಮ್ಮ ಕೃತಿಗಳ ಮೂಲಕ ಜೀವಂತವಾಗಿ ಇರಿಸಿದವರಲ್ಲಿ ರಾಷ್ಟ್ರಕವಿ ಕುವೆಂಪು ಅಗ್ರಗಣ್ಯರು. ಅವರು ನಡೆದಾಡಿದ ನೆಲದಲ್ಲಿ ಬದುಕುತ್ತಿರುವ ನಾವುಗಳೇ ಪುಣ್ಯವಂತರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕುಪ್ಪಳಿಯ ಹೇಮಾಂಗಣದಲ್ಲಿ ಬೆಂಗಳೂರಿನ ಜಾಗೃತಿ ಟ್ರಸ್ಟ್ ಮತ್ತು ರಿಚ್ಮಂಡ್‌ಟೌನ್‌ನ ರೋಟರಿ ಕ್ಲಬ್ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕುವೆಂಪು ಜಾಗೃತಿ ವೈಭವ ಕಾರ್ಯಕ್ರಮದಲ್ಲಿ ಟಿ.ಎಸ್.ಮಂಜುನಾಥ ಅವರ ಭಾವಜೀವಿಯ ಭಾವಬಂಧ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ತಮ್ಮ ಕೃತಿಗಳಲ್ಲಿ ಮಲೆನಾಡಿನ ಸೊಬಗನ್ನು ಅತ್ಯಂತ ಅರ್ಥಪೂರ್ಣವಾಗಿ ಕುವೆಂಪು ಕಟ್ಟಿಕೊಟ್ಟಿದ್ದಾರೆ. ನಿತ್ಯ ಹರಿದ್ವರ್ಣದ ಅಂದಿನ ಕಾಡು ಮಾಯವಾಗಿ, ಇಂದು ಅಕೇಶಿಯ ಕಾಡು ನಿರ್ಮಾಣವಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ಈ ಬಾರಿ ಮುಂಗಾರಿನ ಕೊರತೆಯಿಂದ ಆತಂಕಕ್ಕಿಡಾಗಿದ್ದ ಮಲೆನಾಡಿನಲ್ಲಿ ಅರ್ಧ ಮಳೆಗಾಲದ ನಂತರದ ದಿನಗಳಲ್ಲಿ ಮಳೆ ಆಗುತ್ತಿರುವುದು ತುಸು ಸಮಾಧಾನ ತಂದಿದೆ. ಈ ಭಾಗದಲ್ಲಿ ಇನ್ನಷ್ಟೇ ಕೃಷಿ ಚಟುವಟಿಕೆ ಭರದಿಂದ ಆರಂಭಗೊಳ್ಳಬೇಕಿದೆ. ಮುಂಗಾರು ಮಳೆಯ ಆರ್ಭಟದ ನಡುವೆಯೂ ಮಹಾನಗರದಿಂದ ಇಲ್ಲಿಗೆ ಆಗಮಿಸಿ ರಾಷ್ಟ್ರಕವಿಯ ಈ ನೆಲದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಮ್ಮ ಸುಸಂಸ್ಕೃತ ಮನಸ್ಸಿನ ಕಳಕಳಿಯ ದ್ಯೋತಕವಾಗಿದೆ ಎಂದು ಆಯೋಜಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಷಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಎನ್.ಎ.ಹ್ಯಾರಿಸ್, ಎಂ.ಆರ್.ವೆಂಕಟೇಶ್, ಉಮೇಶ್ ಗೌಡ, ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಡಾ. ಸಿ.ಎಲ್.ಶಿವಮೂರ್ತಿ, ಡಾ. ಶ್ರೀಕಾಂತ್ ಮಂಗಳ, ನಾಟಿ ವೈದ್ಯೆ ಲಕ್ಷ್ಮಮ್ಮ, ವಿಜಯಲಕ್ಷ್ಮೀ ಅಶೋಕಾಚಾರ್, ಮಂಜು ಎನ್.ಸಿಂಹ ಇದ್ದರು.