ಜಿಲ್ಲೆ

ಫೆ.20, 21ರಂದು ಮಲೆನಾಡು ಸಾಂಸ್ಕೃತಿಕ ಕಲಾ ಉತ್ಸವ

ಶಿವಮೊಗ್ಗ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ, ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡದ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಮಲೆನಾಡು ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವ ಹಾಗೂ 66ನೇ ಸಾಂಸ್ಕೃತಿಕ ಪ್ರತಿಭೋತ್ಸವ ಫೆ.20 ಮತ್ತು 21ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕರ್ನಾಟಕ ಸಂಘದಲ್ಲಿ ನಡೆಯಲಿದೆ.

ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಕಲಾ ಉತ್ಸವ ಇದಾಗಿದೆ. ರಾಷ್ಟ್ರೀಯ ಚಿಣ್ಣರ 2ನೇ ಹಬ್ಬ ಮತ್ತು ನೃತ್ಯ ಕಲಾಮೇಳ-6 ಅನ್ನು ಹಮ್ಮಿಕೊಳ್ಳಲಾಗಿದೆ. ಎರಡು ದಿನ ಕಲಾ ಪ್ರದರ್ಶನ, ನೃತ್ಯ, ಗಾಯನ, ನಾಟಕ, ಉಪನ್ಯಾಸ ಮತ್ತು ವಿಚಾರ ಸಂಕಿರಣ ನಡೆಯಲಿವೆ ಎಂದು ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ರಮೇಶ್ ಸುರ್ವೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

20ರಂದು ಬೆಳಗ್ಗೆ 9.30ಕ್ಕೆ ಬೆಳಗಾವಿ ಚಿಪ್ಪಲಕಟ್ಟೆ ಹಿರೇಮಠದ ಡಾ. ಶ್ರೀ ಕಲ್ಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪತ್ರಕರ್ತ ಬಿ.ಗಣಪತಿ ಉದ್ಘಾಟಿಸುವರು. ಉಡುಪಿ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ರಮಾನಂದ ಗುರೂಜಿ ಪ್ರಶಸ್ತಿ ಪ್ರದಾನ ಮಾಡುವರು. ಅದೇ ದಿನ ಕೊಪ್ಪಳದ ಬದರಿ ನಾರಾಯಣ ಪುರೋಹಿತ್ ಅವರ ವ್ಯಂಗ್ಯಚಿತ್ರ, ಆರ್.ಸುಹಾಸ್ ಸುರ್ವೆ ಅವರ ಛಾಯಾಚಿತ್ರ, ಮೇಗರವಳ್ಳಿಯ ಕೆ.ಎಸ್.ಸುರೇಶ್ ಅವರಿಂದ ಯೋಗ ಮತ್ತು ಕಲಾವಿದೆ ಶಾಂತಲಾ ಉದೋಶಿ ಅವರ ನಾಟ್ಯ ಮಂಜರಿ ಪ್ರದರ್ಶನವಿದೆ ಎಂದರು.

ಬೆಳಗ್ಗೆ 10ಕ್ಕೆ ಎಂ.ಎನ್.ಸುರೇಶ್ ನಿರ್ದೇಶನದ ಕುದುರೆ ಬಂತು ಕುದುರೆ ನಾಟಕ ಪ್ರದರ್ಶನಗೊಳ್ಳಲಿದೆ. ಬಳಿಕ ಉಪನ್ಯಾಸ ಮಾಲಿಕೆ ಮತ್ತು ಸಂವಾದ ನಡೆಯಲಿದ್ದು, ಸಂಖ್ಯಾಶಾಸ್ತ್ರ ಪ್ರವೀಣ ಬಸವರಾಜ ಉಮ್ರಾಣಿ ಅವರೊಂದಿಗೆ ಸಂವಾದ ನಡೆಯಲಿದೆ. ಬಳಿಕ ಕವಿಗಳ ಕಣ್ಣಲ್ಲಿ ಮಲೆನಾಡು ಕರ್ನಾಟಕ ಕವನ ವಾಚನ ನಡೆಯಲಿದೆ. ಸಂಜೆ 7ಕ್ಕೆ ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

21ರಂದು ಬೆಳಗ್ಗೆ 9.30ರಿಂದ ಗಾಯಕರಿಂದ ಜನಪದ ಝೇಂಕಾರ, ಸುಗಮ ಸಂಗೀತ, ಯಾಕುಬ್ ಖಾನ್ ಅವರ ಚಿತ್ರಕಲೆ, ಸವಿತಾ ಘೋರ್ಷಡೆ ಅವರ ಗೆಜ್ಜೆ-ಹೆಜ್ಜೆ ನೃತ್ಯ ಪ್ರದರ್ಶನವಿದೆ. ಅರ್ಜುನ್ ಇಟಗಿ ಅವರ ಗಾನಸುಧೆ ಇದೆ. ಜ್ಞಾಪಕ ಶಕ್ತಿ, ಪುಟಾಣಿಗಳ ಭಾಷಣ, ಯಕ್ಷ ನೃತ್ಯ, ಚಲನಚಿತ್ರ ನೃತ್ಯ, ಭರತನಾಟ್ಯ, ಹಿಂದೂಸ್ತಾನಿ ಗಾಯನ, ಯಕ್ಷಗಾನ ಪ್ರದರ್ಶನವಿದೆ. ಸಂಜೆ 5ಕ್ಕೆ ಕರ್ನಾಟಕದ ಸಂಘದ ಅಧ್ಯಕ್ಷ ಎನ್.ಎಂ.ಸುಂದರರಾಜು ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನ ಒಂದು ಚಿಂತನೆ ವಿಚಾರ ಸಂಕಿರಣ ನಡೆಯಲಿದೆ. 6ಕ್ಕೆ ವಿಚಾರ ಸಂಕಿರಣದಲ್ಲಿ ನಮ್ಮೊಡನೆ ಕಾರ್ಯಕ್ರಮಕ್ಕೆ ಶ್ರೀ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸುವರು. ಸಾಹಿತಿ ಸಿದ್ಧಾರಾಮ ಹೊನ್ಕಲ್ ಅಧ್ಯಕ್ಷತೆ ವಹಿಸುವರು ಎಂದರು. ತೀರ್ಥಹಳ್ಳಿಯ ಗಣೇಶ್ ಇದ್ದರು.