ಜಿಲ್ಲೆ

ಹರಿಹರ ತಾಲೂಕಲ್ಲಿ 1029 ಮನೆ ನಿರ್ಮಿಸುವ ಗುರಿ

ತಾಪಂ ಇಒ ಸುಮಲತಾ ಹೇಳಿಕೆ ಕೊಮಾರನಹಳ್ಳಿಯಲ್ಲಿ ಪಿಎಂ ಆವಾಸ್ ಯೋಜನೆ ಮನೆಯ ಗೃಹಪ್ರವೇಶ

ಮಲೇಬೆನ್ನೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಹರಿಹರ ತಾಲೂಕಿನಲ್ಲಿ ಈ ವರ್ಷ 1029 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಸುಮಲತಾ ತಿಳಿಸಿದರು.

ಸಮೀಪದ ಕೊಮಾರನಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಯೊಂದರ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹರಿಹರ ತಾಲೂಕಿನಲ್ಲಿ ಕಳೆದ ವರ್ಷ 509 ಮನೆ ನಿರ್ಮಾಣದ ಗುರಿ ಹೊಂದಲಾಗಿತ್ತು. ಇದರಲ್ಲಿ 123 ಮನೆಗಳು ಪೂರ್ಣಗೊಂಡಿದ್ದು, 250 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಪೂರ್ಣಗೊಂಡಿರುವ ಒಂದು ಮನೆಯನ್ನು ಸಾಂಕೇತಿಕವಾಗಿ ಗೃಹಪ್ರವೇಶ ಮಾಡಲಾಗಿದೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಹಿರೇಹಾಲಿವಾಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 30 ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, 12 ಎಸ್‌ಸಿ, ಎಸ್‌ಟಿ, 17 ಸಾಮಾನ್ಯ ವರ್ಗದವರಿಗೆ ಮನೆಗಳನ್ನು ನಿರ್ಮಿಸಲು ಆದೇಶ ಪತ್ರ ನೀಡಲಾಗಿದ್ದು, ಇದರಲ್ಲಿ ಈಗಾಗಲೇ 27 ಮನೆಗಳ ನಿರ್ಮಾಣ ಪೂರ್ಣಗೊಂಡಿವೆ ಎಂದರು.

ಸಮೀಪದ ಕೊಮಾರನಹಳ್ಳಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಯೊಂದನ್ನು ಶಾಸಕ ಬಿ.ಪಿ.ಹರೀಶ್ ಟೇಪ್ ಕತ್ತರಿಸಿ, ಗೃಹಪ್ರವೇಶ ಮಾಡುವ ಮೂಲಕ ತಾಲೂಕಿನಲ್ಲಿ ಸಾಂಕೇತಿಕವಾಗಿ ಯೋಜನೆಗೆ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ತಾಪಂ ಮಾಜಿ ಅಧ್ಯಕ್ಷ ಐರಣಿ ಅಣ್ಣೇಶ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಮಂಜುನಾಥ್, ಉಪಾಧ್ಯಕ್ಷೆ ಕಮಲೀಬಾಯಿ ಪರಮೇಶ್ ನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್, ಸದಸ್ಯ ಪಿ.ಸಿ. ಮೋಹನ್, ದಾನಪ್ಪರ ಹನುಮಂತಪ್ಪ, ಸುನಿಲ್, ಐರಣಿ ಮಹೇಶ್ವರಪ್ಪ, ರಾಮಣಸ್ವಾಮಿ, ರಂಗನಾಥ್ ಮತ್ತಿತರರು ಇದ್ದರು.