ಜಿಲ್ಲೆ

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಳಿಮುಖ

Davangere - Desk - Basavaraja P

ಉಕ್ಕಡಗಾತ್ರಿ- ಫತೇಪುರ ರಸ್ತೆಯಲ್ಲಿ ಸಂಚಾರ ಆರಂಭ

ಮಲೆಬೆನ್ನೂರು: ಮಲೆನಾಡಿನಲ್ಲಿ ಕಳೆದ ಒಂದು ವಾರ ಸತತವಾಗಿ ಸುರಿದ ಮುಂಗಾರು ಮಳೆ ಶನಿವಾರದಿಂದ ಕಡಿಮೆ ಆಗಿದ್ದು, ತುಂಗಾ ಮತ್ತು ಭದ್ರಾ ನದಿಗಳಲ್ಲಿ ನೀರಿನ ಹರಿವು ಭಾನುವಾರ ಗಣನೀಯವಾಗಿ ಇಳಿಕೆಯಾಗಿದೆ.

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಳಿಕೆಯಾಗಿದ್ದು, ಜಲಾವೃತಗೊಂಡಿದ್ದ ಉಕ್ಕಡಗಾತ್ರಿಯ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನದಲ್ಲಿ ಸ್ನಾನಘಟ್ಟ ಮತ್ತು ಹಣ್ಣು, ಕಾಯಿ ಅಂಗಡಿಗಳು ಕಾಣಿಸತೊಡಗಿವೆ. ಅಲ್ಲದೇ ಉಕ್ಕಡಗಾತ್ರಿ- ಫತೇಪುರ ರಸ್ತೆ ಸಂಪರ್ಕ ಸಂಚಾರಕ್ಕೆ ತೆರೆದುಕೊಂಡಿದ್ದು, ಈಗಾಗಲೇ ವಾಹನಗಳ ಸಂಚಾರ ಆರಂಭಗೊಂಡಿವೆ ಎಂದು ದೇವಸ್ಥಾನದ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.

ಭದ್ರಾ ಒಳ ಹರಿವು ದಿಢೀರ್ ಇಳಿಕೆ: ಭದ್ರಾ ಜಲಾಶಯಕ್ಕೆ ಶನಿವಾರ 46 ಸಾವಿರ ಕ್ಯೂಸೆಕ್ ಇದ್ದ ಒಳಹರಿವು ಭಾನುವಾರ 25ಸಾವಿರ ಕ್ಯೂಸೆಕ್‌ಗೆ ದಿಢೀರ್ ಇಳಿಕೆ ಆಗಿದೆ. ಭಾನುವಾರ ಸಂಜೆ ಜಲಾಶಯದ ನೀರಿನ ಮಟ್ಟ 166 ಅಡಿ ದಾಟಿದ್ದು, ಕಳೆದ ವರ್ಷಕ್ಕಿಂತ 23 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 143 ಅಡಿ ನೀರಿತ್ತು. ಜಲಾಶಯದ ಗರಿಷ್ಟ ಮಟ್ಟ 186 ಅಡಿಗಳಾಗಿದ್ದು, ಜಲಾಶಯ ಭರ್ತಿಗೆ 20 ಅಡಿ ಮಾತ್ರ ಬಾಕಿ ಇದೆ.

ಸಸಿ ಮಡಿಗೆ ಸಿದ್ಧತೆ: ಭದ್ರಾ ಜಲಾಶಯದಲ್ಲಿ 165 ಅಡಿ ನೀರು ಸಂಗ್ರಹವಾಗಿರುವುದರಿಂದ ಅಚ್ಚುಕಟ್ಟಿನ ರೈತರು ಮುಂಗಾರು ಹಂಗಾಮಿನ ಭತ್ತದ ಬೆಳೆಗಾಗಿ ನಾಟಿ ಮಾಡಲು, ಸಸಿ ಮಡಿ ಚೆಲ್ಲಲು ಸಿದ್ಧತೆ ನಡೆಸಿದ್ದಾರೆ. ಸ್ವಂತ ನೀರಿನ ಸೌಲಭ್ಯ ಇರುವವರು ಈಗಾಗಲೇ ಸಸಿ ಮಡಿ ಚೆಲ್ಲಿದ್ದಾರೆ.

ಅಧಿಕಾರಿಗಳಿಂದ ಹಾನಿ ಪರಿಶೀಲನೆ: ಮಲೇಬೆನ್ನೂರು ಹೋಬಳಿ ಭಾಗದಲ್ಲಿ ಪುನರ್ವಸು ಮಳೆಯಬ್ಬರಕ್ಕೆ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗೋವಿನಹಾಳು, ಎಳೆಹೊಳೆ, ಬೂದಿಹಾಳು, ಮಲೇಬೆನ್ನೂರು ಮತ್ತಿತರ ಕಡೆ ಎಂಟು ಮನೆಗಳು ಭಾಗಶಃ ಹಾನಿಗೊಂಡಿವೆ ಎಂದು ಉಪ ತಹಸೀಲ್ದಾರ್ ರವಿ ಮಾಹಿತಿ ನೀಡಿದ್ದಾರೆ.