ಜಿಲ್ಲೆ

ಮನೆಯೇ ಗ್ರಂಥಾಲಯ ಆಂದೋಲನವಾಗಲಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ಆಧುನಿಕ ಡಿಜಿಟಲ್​ ಮಾಧ್ಯಮ ಬಂದ ಮೇಲೆ ಪುಸ್ತಕ ಓದು ಕಡಿಮೆಯಾಗಿದೆ. ಹೀಗಾಗಿ ಜನರಲ್ಲಿ ಓದುವ ಹವ್ಯಾಸವೃದ್ಧಿಗಾಗಿ ದೇಶದೆಲ್ಲೆಡೆ ಮನೆಯೇ ಗ್ರಂಥಾಲಯ ಆಂದೋಲನವಾಗಬೇಕು ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್​ ಹೇಳಿದರು.

ಶುಕ್ರವಾರ ಉಡುಪಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ ಉಡುಪಿ ಶಾಖೆಯಲ್ಲಿ ಮನೆಯೇ ಗ್ರಂಥಾಲಯ ಯೋಜನೆಯಡಿ 130ನೇ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

ಬಸ್​, ರೈಲು, ವಿಮಾನ ನಿಲ್ದಾಣ, ಆಸ್ಪತ್ರೆ ಸಹಿತ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ವಿರಾಮ ಸಿಕ್ಕಾಗ ಓದಲು ಪುಸ್ತಕಗಳು ಲಭ್ಯವಾಗಬೇಕು. ಸರ್ಕಾರ ಇದನ್ನು ಅಗತ್ಯ ಸೇವೆಯಾಗಿ ಪರಿಗಣಿಸಬೇಕು ಎಂದರು.

ಜಪಾನಿನ ಮಿಯಾಜಾಕಿ ವಿವಿಯ ಪ್ರಾಧ್ಯಾಪಕ ಡಾ. ಹರೀಶ್​ ಕುಮಾರ್​ ಮಧ್ಯಸ್ಥ ಮಾತನಾಡಿ, ಸಾಗರೋತ್ತರ ರಾಷ್ಟ್ರಗಳಿಗೂ ಪುಸ್ತಕ ವಿತರಣೆ, ಗ್ರಂಥಾಲಯ ಅಭಿಯಾನ ವಿಸ್ತರಣೆಯಾಗಬೇಕು. ಈ ನ್​ ನಿಟ್ಟಿನಲ್ಲಿ ನಾನು ವಿಶೇಷ ಆಸಕ್ತಿ ವಹಿಸುತ್ತೇನೆ ಎಂದರು.

ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಯುವಜನರಲ್ಲಿ ಓದುವ ಹವ್ಯಾಸ ಮೂಡಿಸುವ ಹೊಣೆಗಾರಿಕೆಯನ್ನು ಸಂಸಂಸ್ಥೆಗಳಿಗಿವೆ ಎಂದು ನುಡಿದರು.

ರಥಬೀದಿ ಗೆಳೆಯರು ಸಂಸ್ಥೆ ಅಧ್ಯಕ್ಷ ಉದ್ಯಾವರ ನಾಗೇಶ್​ ಕುಮಾರ್​ ಮಾತನಾಡಿದರು. ಮಲಬಾರ್​ ಗೋಲ್ಡ್​ ಆ್ಯಂಡ್​ ಡೈಮಂಡ್ಸ್​ ಉಡುಪಿ ಶಾಖೆ ವ್ಯವಸ್ಥಾಪಕ ಹಫೀಝ್​ ರೆಹಮಾನ್​, ಕಸಾಪ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್​ ಹಂದಾಡಿ, ಮಲಬಾರ್​ ಗೋಲ್ಡ್​ ಸಂಸ್ಥೆಯ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್​ ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​. ಪಿ. ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು.