ಮಳವಳ್ಳಿ: ಪಟ್ಟಣದ ಐತಿಹಾಸಿಕ ಶ್ರೀ ವೀರಭದ್ರಸ್ವಾಮಿ ದೇವಾಲಯ ಅಪಾರ ಭಕ್ತಗಣವನ್ನು ಹೊಂದಿದೆ. ಇಲ್ಲಿನ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಅಭಿಷೇಕ ಮಾಡಿದ ಮತ್ತು ಶ್ರೀ ವೀರಭದ್ರಸ್ವಾಮಿಯ ಪಾದದಿಂದ ಶೇಖರಿಸಲ್ಪಟ್ಟ ತೀರ್ಥವನ್ನು ಭಯಪೀಡಿತರಾದ ಮಕ್ಕಳಿಗೆ, ಅನಾರೋಗ್ಯ ಹಾಗೂ ಭೀತಿ ಶಂಕೆಯಿಂದ ಬಳಲುತ್ತಿರುವವರಿಗೆ ಪ್ರೋಕ್ಷಣೆ ಮಾಡಿ, ತಾಯತ ಕಟ್ಟುವುದರಿಂದ ಭಯ ಹಾಗೂ ಭೀತಿ ದೂರವಾಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬುದಕ್ಕೆ ಶಿಲಾ ಶಾಸನಗಳು ಸಾಕ್ಷಿ ಒದಗಿಸುತ್ತವೆ. ದೇವಸ್ಥಾನವು ಗರ್ಭಗುಡಿ, ಸುಖನಾಸಿ, ನಾಟ್ಯಮಂಟಪ ಹಾಗೂ ಮುಖಮಂಟಪವನ್ನು ಒಳಗೊಂಡು ನಿರ್ಮಿತವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಈ ದೇವಸ್ಥಾನಕ್ಕೆ ಸುತ್ತಮುತ್ತಲ ಜಿಲ್ಲೆಗಳಿಂದ ಭಕ್ತರು ಆಗಮಿಸಿ, ಪೂಜೆ ಸಲ್ಲಿಸಿ, ದರ್ಶನ ಪಡೆಯುತ್ತಾರೆ.
ಶ್ರೀ ವೀರಭದ್ರಸ್ವಾಮಿ ದೇವರ ವಿಗ್ರಹ ಏಕಶಿಲೆಯಿಂದ ಕೆತ್ತನೆಗೊಂಡಿದ್ದು, ಪ್ರಭಾವಳಿ ಸಮೇತ ಆರು ಅಡಿ ಎತ್ತರದ ಕತ್ತಿ, ಬಿಲ್ಲು ಬಾಣ ಗದೆಯನ್ನು ಹಿಡಿದಿರುವ ಚತುರ್ಬಾಹು ಮೂರ್ತಿಯಾಗಿದೆ. ಪ್ರಭಾವಳಿಯ ಕೆಳಭಾಗ ನಂದಿ ಹಾಗೂ ದಕ್ಷನ ವಿಗ್ರಹವಿದೆ. ದೇವರ ಮೂರ್ತಿಯ ಎದುರಿನಲ್ಲಿ ಬೃಹದಾಕಾರವಾಗಿ ಪ್ರತಿಷ್ಠಾಪಿಸಿರುವ ನಂದಿ ವಿಗ್ರಹ ಗಮನ ಸೆಳೆಯುತ್ತದೆ. ದೇವರಿಗೆ ಪ್ರತಿನಿತ್ಯ ವಿಧಿ ವಿಧಾಗಳು ನಡೆಯಲಿದ್ದು, ಹುಣ್ಣಿಮೆ ಹಾಗೂ ಅಮಾವಾಸ್ಯೆ ದಿನಗಳಂದು ದೇವರ ಮೂರ್ತಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಅಂದು ಪಾದದಿಂದ ಶೇಖರಿಸಲ್ಪಟ್ಟ ಅಭಿಷೇಕದ ತೀರ್ಥವನ್ನು ಭಯಪೀಡಿತರಾದ ಮಕ್ಕಳಿಗೆ ಹಾಗೂ ಹಲವು ಕಾಯಿಲೆಗಳು ಮತ್ತು ಭೀತಿ ಶಂಕೆಯಿಂದ ಬಳಲುತ್ತಿರುವವರಿಗೆ ಪ್ರೋಕ್ಷಣೆ ಮಾಡಿ, ಸ್ವಾಮಿಯ ಪಾದದ ಮೇಲಿಟ್ಟಿರುವ ತಾಯತ ಕಟ್ಟಿದರೆ ಭಯ-ಭೀತಿ ಹಾಗೂ ರೋಗ-ರುಜಿನಗಳು ದೂರವಾಗಿ ಸಹಜ ಸ್ಥಿತಿಗೆ ಬರುತ್ತಾರೆಂಬುದು ನಂಬಿಕೆ.
ಪಟ್ಟಣ, ತಾಲೂಕು ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿರುವ ಭಕ್ತರು ಮದುವೆ, ಗೃಹಪ್ರವೇಶ ಸೇರಿದಂತೆ ಯಾವುದೇ ರೀತಿಯ ಶುಭ ಕಾರ್ಯಗಳು ತಮ್ಮ ಮನೆ, ಗ್ರಾಮಗಳಲ್ಲಿ ನಡೆದರೆ ಇಲ್ಲಿಂದ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಪೂಜೆ ಸಲ್ಲಿಸುತ್ತಾರೆ. ಅರ್ಚಕ ತಂಡದೊಡನೆ ಉತ್ಸವ ಮೂರ್ತಿಯನ್ನು ಭಕ್ತಿಯಿಂದ ಕರೆದೊಯ್ದು ಪೂಜೆ ಮಾಡಿಸುವುದರ ಜತೆಗೆ, ಗ್ರಾಮದಲ್ಲಿ ಮೆರವಣಿಗೆ ನಡೆಸಿ ಭಕ್ತಿ ಸಮರ್ಪಿಸುವುದು ವಾಡಿಕೆಯಾಗಿದೆ.
ನಗುಮುಖದ ಕಲಾಕೃತಿ: ಸಾಮಾನ್ಯವಾಗಿ ವೀರಭದ್ರಸ್ವಾಮಿ ದೇವರ ವಿಗ್ರಹ ರೌದ್ರಾವತಾರದಲ್ಲಿರುವುದನ್ನು ಕಂಡಿರುತ್ತೇವೆ. ಆದರೆ ಈ ದೇವಸ್ಥಾನದ ಗರ್ಭಗುಡಿಯಲ್ಲಿ ನಗುಮೊಗದಲ್ಲಿರುವ ವೀರಭದ್ರಸ್ವಾಮಿ ವಿಗ್ರಹ ವಿಶೇಷತೆಯಿಂದ ಕೂಡಿದೆ. ಇಲ್ಲಿನ ವಿಗ್ರಹವನ್ನು ಅಲಂಕಾರವಿಲ್ಲದ ವೇಳೆಯಲ್ಲಿ ನೋಡಿದರೆ ಸೌಮ್ಯ ಹಾಗೂ ನಗುಮೊಗದ ರೂಪದಲ್ಲಿದ್ದು, ಅಲಂಕಾರದ ನಂತರ ರೌದ್ರರೂಪ ಕಾಣುವುದು ಇದರ ವಿಶೇಷ. ಶಿಲ್ಪಿಯು ತನ್ನ ಕಲ್ಪನೆಯಲ್ಲಿ ಹಸನ್ಮುಖ ಕಲಾಕೃತಿಯಾಗಿ ಕೆತ್ತನೆ ಮಾಡಿರುವುದು ವೈಶಿಷ್ಟೃವಾಗಿದೆ.
ವಿಶೇಷ ಪೂಜೆಗಳು: ಮಹಾಶಿವರಾತ್ರಿಯ ದಿನದಂದು ಸಹಸ್ರ ಬಿಲ್ವಾರ್ಚನೆ ಅಭಿಷೇಕ, ಕಾರ್ತಿಕ ಮಾಸ ಹಾಗೂ ಧನುರ್ಮಾಸ ಸಮಯದಲ್ಲಿ ರುದ್ರಾಭಿಷೇಕ ಜರುಗುತ್ತದೆ. ವಿಶೇಷವಾಗಿ ಶ್ರಾವಣ ಮಾಸದ ಮೊದಲ ಮಂಗಳವಾರ ವೀರಗಾಸೆಯ ಸಮೇತ ಶ್ರೀ ವೀರಭದ್ರಸ್ವಾಮಿ ಮತ್ತು ಭದ್ರಕಾಳಿಯ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ಭಕ್ತಿ ಪ್ರಧಾನವಾಗಿ ನಡೆಸಲಾಗುತ್ತದೆ. ಈ ವಿಶೇಷ ದಿನದಂದು ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಪಾಲ್ಗೊಳ್ಳುತ್ತಾರೆ.