ಬಂದ್ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿರುವುದು. 
ಜಿಲ್ಲೆ

ಮಳವಳ್ಳಿ ಪಟ್ಟಣ ಬಂದ್ ಯಶಸ್ವಿ

ಅಭಿನಯ್ ಎಚ್.ಎಂ

ಮಳವಳ್ಳಿ:  ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟ ಘಟನೆ ಖಂಡಿಸಿ ಜೆಡಿಎಸ್, ಬಿಜೆಪಿ, ಹಿಂದುಪರ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಕರೆ ನೀಡಲಾಗಿದ್ದ ಪಟ್ಟಣ ಬಂದ್ ಬಹುತೇಕ ಯಶಸ್ವಿಯಾಯಿತು.

ಹಾಲು, ಔಷಧ ಅಂಗಡಿಗಳನ್ನು ಹೊರತುಪಡಿಸಿ ಬೆಳಗ್ಗೆಯಿಂದಲೇ ಇತರ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ ಬಾಗಿಲು ಮುಚ್ಚುವ ಮೂಲಕ ಬಂದ್‌ಗೆ ಸಹಕರಿಸಿದರು. ಮೈತ್ರಿ ಪಕ್ಷಗಳು ಹಾಗೂ ಸಂಘಟನೆಗಳ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಸಿ ಹಿಂದು ಪರ ಘೋಷಣೆ ಕೂಗಿದರು. ನಂತರ ಅನಂತ ರಾಮ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಮದ್ದೂರು ಪಟ್ಟಣದಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದ ಅಹಿತಕರ ಘಟನೆ ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ದುರ್ಘಟನೆಗಳು ಸಮಾಜದಲ್ಲಿ ಕೋಮು ಸಂಘರ್ಷ ಸೃಷ್ಟಿಸಿ ಶಾಂತಿ ಹಾಳು ಮಾಡುತ್ತದೆ. ಸರ್ಕಾರ ತಕ್ಷಣವೇ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಲಿ ನಡೆದ ಅನ್ಯಾಯಕ್ಕೆ ನಾವು ಸಹಾನುಭೂತಿ ತೋರಿಸಿ, ಸಂಪೂರ್ಣ ಮಳವಳ್ಳಿಯನ್ನೇ ಬಂದ್ ಮಾಡಿದ್ದೇವೆ. ಸರ್ಕಾರ ಒಂದು ಧರ್ಮವನ್ನು ಓಲೈಸಿ ಇನ್ನೊಂದು ಧರ್ಮವನ್ನು ಕಡೆಗಣಿಸುವುದರಿಂದ ಇಂತಹ ಅಹಿತಕರ ಘಟನೆಗಳು ನಡೆಯುತ್ತಿವೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ತತ್ವವನ್ನು ಪಾಲಿಸಬೇಕು ಎಂದರು.

ಕುವೆಂಪು, ಪಂಪ ಹಾಗೂ ಅಬ್ದುಲ್ ಕಲಾಂ ಅವರ ಉಲ್ಲೇಖದಂತೆ ಮಾನವೀಯ ಮೌಲ್ಯಗಳನ್ನು ಗೌರವಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಡಿ.ಜಯರಾಮು ಮಾತನಾಡಿ, ಇಂತಹ ಅರಾಜಕತೆ ಮುಂದುವರಿದರೆ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಅಂತಿಮವಾಗಿ ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರಾದ ಅಶೋಕ್, ಕುಮಾರ್, ಯಮದೂರು ಸಿದ್ದರಾಜು, ಕೃಷ್ಣ, ನಂದಕುಮಾರ್, ಕಾಂತರಾಜು, ರವಿ, ಪ್ರಶಾಂತ್, ಪ್ರಭು, ರಾಜೀವ್, ಗೋವಿಂದ ನಾಯಕ್ ಮತ್ತಿತರರಿದ್ದರು.