ಜಿಲ್ಲೆ

ರಕ್ತ ಸುರಿಯುವ ಚಳವಳಿಗೆ ತಡೆ

ನಾಗೇಶ ಎಸ್

ಮಳವಳ್ಳಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಶನಿವಾರ ಪಟ್ಟಣದಲ್ಲಿ ಕನ್ನಡಪರ ಸಂಘಟನೆ ಜತೆಗೂಡಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ನದಿಗೆ ರಕ್ತ ಸುರಿಯಲು ತೆರಳಿದ್ದ ಹೋರಾಟಗಾರರನ್ನು ಪೊಲೀಸರು ತಡೆದರು.

ಪಟ್ಟಣದ ಅನಂತ್‌ರಾಮ್ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಿರಂಜ್ ಬಳಸಿ ರಕ್ತವನ್ನು ಬಾಟಲ್‌ಗಳಲ್ಲಿ ಸಂಗ್ರಹಮಾಡಿಕೊಂಡರು. ನಂತರ ಸುಮಾರು ಐವತ್ತಕ್ಕೂ ಹೆಚ್ಚು ಬೈಕ್‌ಗಳಲ್ಲಿ ತಾಲೂಕಿನ ಗಡಿ ಭಾಗದಲ್ಲಿ ಹರಿಯುತ್ತಿರುವ ಕಾವೇರಿ ನದಿಯ ಸತ್ತೇಗಾಲ ಸೇತುವೆ ಬಳಿಗೆ ತೆರಳಿದರು. ಆದರೆ ಕೊಳ್ಳೇಗಾಲ ಡಿವೈಎಸ್‌ಪಿ ಸೋಮಶೇಖರ್ ನೇತೃತ್ವದಲ್ಲಿ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟಗಾರರನ್ನು ನದಿ ಬಳಿಗೆ ಹೋಗದಂತೆ ತಡೆದರು.

ನಿಮ್ಮ ಹೋರಾಟಕ್ಕೆ ನಮ್ಮ ತಕರಾರಿಲ್ಲ. ಆದರೆ ನದಿಗೆ ರಕ್ತ ಸುರಿಯಲು ಅವಕಾಶ ನೀಡಲಾಗದು. ರಕ್ತವಿರುವ ಬಾಟಲ್‌ಗಳನ್ನು ನಮಗೆ ಕೊಟ್ಟು ಸೇತುವೆ ಮೇಲೆ ಹೋಗುವಂತೆ ಪೊಲೀಸರು ಮನವೊಲಿಸಲು ಮುಂದಾದರು. ನಾವು ಕಾವೇರಿ ನೀರಿಗಾಗಿ ಹೋರಾಡುತ್ತಿದ್ದು, ತಮಿಳುನಾಡಿಗೆ ರಕ್ತವನ್ನು ಕೊಟ್ಟೇವು ನೀರು ಕೊಡಲಾಗದೆಂಬ ಜಾಗೃತಿಯ ಚಳವಳಿ ನಡೆಸುತ್ತಿದ್ದೇವೆ. ರಕ್ತವನ್ನು ನದಿಯಲ್ಲಿ ಸುರಿಯಲೇಬೇಕೆಂದು ಪಟ್ಟು ಹಿಡಿದು ಮುನ್ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಎಲ್ಲರನ್ನೂ ತಡೆದು ರಕ್ತದ ಬಾಟಲ್‌ಗಳನ್ನು ಕಸಿದುಕೊಂಡರು. ಹೀಗಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ಉಂಟಾಯಿತು.
ಮಾಜಿ ಶಾಸಕ ಅನ್ನದಾನಿ ಮಾತನಾಡಿ, ಕಾಂಗ್ರೆಸ್‌ನವರು ರಾಜಕೀಯ ಅಧಿಕಾರಕ್ಕಾಗಿ ರೈತರ ಬದುಕನ್ನು ಬಲಿಕೊಟ್ಟಿದ್ದಾರೆ. ಜತೆಗೆ ಜನರ ಕುಡಿಯುವ ನೀರಿಗೂ ತೊಂದರೆ ಎದುರಾಗುತ್ತಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರನ್ನು ಬಳಸಿಕೊಂಡು ಸಿದ್ದರಾಮಯ್ಯ ಸರ್ಕಾರ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು. ಒಂದು ಗಂಟೆಗೂ ಹೆಚ್ಚು ಸಮಯ ನಡೆದ ಪ್ರತಿಭಟನೆಯಿಂದ ಹೆದ್ದಾರಿಯಲ್ಲಿ ವಾಹನಗಳು ಕಿ.ಮೀ. ಗಟ್ಟಲೇ ನಿಂತಿದ್ದವು.

ಜೆಡಿಎಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಡಿ.ಜಯರಾಮು, ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ನಾಗೇಶ್, ಪುರಸಭೆ ಸದಸ್ಯರಾದ ಟಿ.ನಂದಕುಮಾರ್, ಪ್ರಶಾಂತ್, ಸಿದ್ದರಾಜು, ನೂರುಲ್ಲಾ, ಜಯಸಿಂಹ, ಜೆಡಿಎಸ್ ಮುಖಂಡರಾದ ಮಲ್ಲೇಗೌಡ, ಚಂದಳ್ಳಿ ಶ್ರೀಧರ, ಪ್ರಭು, ಮಾರೇಹಳ್ಳಿ ಕಿಟ್ಟಿ, ಕಂಬರಾಜು, ಸದಾ, ನಾಗರಾಜು, ಅಕ್ಕಿಕೃಷ್ಣ, ರಂಜಿತ್ ಇತರರು ಇದ್ದರು.