ಸರ್ಕಾರದ ನಡೆಗೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಿರೋಧ
- ಮಳವಳ್ಳಿ : ತಮಿಳುನಾಡಿಗೆ ನೀರು ಹರಿಸಲು ಕೆಆರ್ ಎಸ್ ಅಣೆಕಟ್ಟೆಯಿಂದ ನದಿಗೆ ನೀರು ಹರಿಸಿಕೊಂಡು ಜಲಪಾತೋತ್ಸವ ನಡೆಸುತ್ತಿರುವ ಸರ್ಕಾರ ಹಾಗೂ ಸ್ಥಳೀಯ ಶಾಸಕರ ನಡೆ ವಿರೋಧಿಸಿ ಸೆ.14 ರಂದು ಬಿಜೆಪಿ, ಜೆಡಿಎಸ್ ವತಿಯಿಂದ ರೈತರ ಜತೆಗೂಡಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು. ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿಸಿ ಜಲಪಾತೋತ್ಸವ ನಡೆಸುತ್ತಿರುವುದು ಖಂಡನೀಯ. ಇದನ್ನುವಿರೋಧಿಸಿ ಪ್ರತಿಭಟನೆ ನಡೆಸುವ ಸಂಬಂಧ ಜೆಡಿಎಸ್, ಬಿಜೆಪಿ ಮುಖಂಡರೊಡನೆ ಶುಕ್ರವಾರ ನಡೆಸಿದ ಪೂರ್ವ ಸಿದ್ಧತಾ ಸಭೆ ನಂತರ ಅವರು ಮಾತನಾಡಿದರು.ಜಲಪಾತೋತ್ಸವ ನೆಪದಲ್ಲಿ ಮೋಜು, ಮಸ್ತಿಮಾಡಲು ಮುಂದಾಗಿರುವ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ. ಸರ್ಕಾರ, ಜಿಲ್ಲಾ ಮತ್ತು ತಾಲೂಕು ಆಡಳಿತದ ವಿರುದ್ಧ ಹೋರಾಟದ ರೂಪುರೇಷೆಗಳ ಬಗ್ಗೆ ಎರಡೂ ಪಕ್ಷಗಳ ಮುಖಂಡರ ಹಾಗೂ ರೈತರ ಜತೆ ಚರ್ಚಿಸಿ ಪ್ರತಿಭಟನೆ ನಿರ್ಧಾರ ಕೈಗೊಳ್ಳಲಾಗಿದೆ.14 ರ ಸಂಜೆ 4.30ಕ್ಕೆ ಜಲಪಾತದ ಸಮೀಪದ ಮಲ್ಲಿಕ್ಯಾತನಹಳ್ಳಿ ಬಳಿ ಕಾರ್ಯಕರ್ತರು ಮತ್ತು ರೈತರ ಜತೆ ಜಮಾಯಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಿದ್ದೇವೆ . ಸಿಎಂ ಆಗಮನದ ಸಂದರ್ಭ ಕಪ್ಪುಬಾವುಟ ಪ್ರದರ್ಶನ ನಡೆಸಿ ಹೋರಾಟ ನಡೆಸುತ್ತೇವೆ ಎಂದು ವಿವರ ನೀಡಿದರು.