ಸಹಕಾರ ಸಂಘದ ಕಾರ್ಯದರ್ಶಿ ನಂಜುಂಡಸ್ವಾಮಿ ವಿವರ
- ಮಳವಳ್ಳಿ : ತಾಲೂಕಿನ ರಾವಣಿ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಸ್ತುತ ವರ್ಷ 5 ಲಕ್ಷ ರೂ. ನಿವ್ವಳ ಆದಾಯ
- ಗಳಿಸಿದೆ ಎಂದು ಕಾರ್ಯದರ್ಶಿ ನಂಜುಂಡಸ್ವಾಮಿ ತಿಳಿಸಿದರು. ಸಂಘದ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಅವರು ವಾರ್ಷಿಕ ವರದಿ ಮಂಡಿಸಿ ಮಾತನಾಡಿದರು. ಹಾಲು ಉತ್ಪಾದಕ ಕೃಷಿಕರ ಸಹಕಾರ ಹಾಗೂ ಸಂಘದ ಉತ್ತಮ ವಹಿವಾಟಿನಿಂದ 2023-24 ಸಾಲಿನಲ್ಲಿ ಸಿಬ್ಬಂದಿ ವೇತನ ಸೇರಿದಂತೆ ಎಲ್ಲಾ ರೀತಿಯ ವೆಚ್ಚಗಳನ್ನು ಭರಿಸಿಕೊಂಡು ಡೇರಿ ನಿವ್ವಳ 5.11.262 ರೂ. ಆದಾಯ ಗಳಿಸಿದೆ. ಗ್ರಾಮೀಣ ಮಟ್ಟದಲ್ಲಿ ಇದು ಸಾಧನೆಯಾಗಿದೆ ಎಂದು ಅವರು ಹೇಳಿದರು.
- ಕಾಳಜಿ ವಹಿಸಿ: ಅಧ್ಯಕ್ಷತೆ ವಹಿಸಿದ್ದ ಡೇರಿ ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಸಂಘದಲ್ಲಿ ಪಶು ಆಹಾರ, ಖನಿಜ ಮಿಶ್ರಣ, ರೋಗ ನಿರೋಧಕ ಔಷಧಗಳನ್ನು ಸಕಾಲದಲ್ಲಿ ಹೈನುಗಾರರಿಗೆ ವಿತರಿಸುವ ಕಾರ್ಯ ನಡೆಯುತ್ತಿದೆ. ಇದನ್ನು ಹಾಲು ಉತ್ಪಾದಕರು ಸಮರ್ಪಕವಾಗಿ ಬಳಸಿಕೊಂಡು, ಗುಣಮಟ್ಟದ ಹಾಲು ಪೂರೈಕೆ ಮಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಆಗ ಹಾಲಿಗೆ ಉತ್ತಮ ಬೆಲೆ, ಸಂಘಕ್ಕೂ ಕೀರ್ತಿ ಬರುತ್ತದೆ ಎಂದು ಸಲಹೆ ನೀಡಿದರು.
- ಹೈನುಗಾರರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ವಾರ್ಷಿಕ ಹೆಚ್ಚು ಹಾಲು ಪೂರೈಸಿದ ಆರ್.ಎಂ.ಲೋಕೇಶ (ಪ್ರಥಮ), ಸುರೇಶ (ದ್ವಿತೀಯ), ಭಾರತಿ (ತೃತಿಯ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.