ಮಳವಳ್ಳಿ: ಸಂಸದ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ನಿಂದನೆ ಮಾಡಿರುವ ಮಹಿಳೆ ವಿರುದ್ಧ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಲಾಯಿತು. ಪಕ್ಷದ ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್ ನೇತೃತ್ವದಲ್ಲಿ ಹತ್ತಾರು ಮುಖಂಡರು ಪೊಲೀಸ್ ಠಾಣೆಗೆ ಆಗಮಿಸಿ ಪಿಎಸ್‌ಐಗೆ ದೂರು ಸಲ್ಲಿಸಿದರು. ನಂತರ ಮಾತನಾಡಿದ ಅವರು, ಮಂಗಳ ಎಂಬ ಮಹಿಳೆಯ ನಮ್ಮ ನಾಯಕ ಡಿ.ಕುಮಾರಸ್ವಾಮಿ ಅವರಿಗೆ ಅತ್ಯಂತ ಕೀಳು ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಎಂದು ಅವರು ದೂರಿದರು.
ಕುಮಾರಸ್ವಾಮಿ ಅವರಿಗೂ ಚಿತ್ರನಟ ದರ್ಶನ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಆದಾಗ್ಯೂ ಅನಗತ್ಯವಾಗಿ ದರ್ಶನ್ ಪ್ರಕರಣದಲ್ಲಿ ನಮ್ಮ ನಾಯಕರ ಹೆಸರನ್ನು ತಂದು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿದೆ. ಆರೋಪಿ ವಿರುದ್ಧ ಕ್ರಮ ವಹಿಸಲು ಪೊಲೀಸರು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.