ಜಿಲ್ಲೆ

ದುಸ್ಥಿತಿಯಲ್ಲಿರುವ ಮಾಲಂಬಿ ಸರ್ಕಾರಿ ಶಾಲೆ

ಮಾದೇಶ್ ತಿ.ನರಸೀಪುರ

ಶನಿವಾರಸಂತೆ: ರಜತ ಮಹೋತ್ಸವ ಆಚರಣೆ ಹೊತ್ತಿನಲ್ಲಿರುವ ಮಾಲಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ದುಸ್ಥಿತಿಯಲ್ಲಿದೆ.

ಗ್ರಾಮದಲ್ಲಿ ಶಾಲೆಯನ್ನು ಉಳಿಸಿಕೊಳ್ಳಲು ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿಸಲು ಪಾಲಕರಿಗೆ ಪ್ರಮುಖ ಮನವರಿಕೆ ಮಾಡಿಕೊಡುತ್ತಿರುವ ನಡುವೆಯೂ ಸರ್ಕಾರ ಕಟ್ಟಡ ದುರಸ್ತಿ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟರೆ ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಸೋಮವಾರಪೇಟೆ ತಾಲೂಕು ಗೋಣಿಮರೂರು ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ಮಾಲಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 1956ರಲ್ಲಿ ಸ್ಥಾಪಿಸಲಾಗಿದೆ. ಪ್ರಾರಂಭದಲ್ಲಿ ಗಿರಿಜನ ಕಾಲನಿ ಬಳಿ ಇದ್ದ ಶಾಲೆಯನ್ನು 1977ರಲ್ಲಿ ಮಾಲಂಬಿ ಗ್ರಾಮದ ಮುಖ್ಯರಸ್ತೆ ಬದಿಗೆ ಸ್ಥಳಾಂತರಿಸಲಾಯಿತು. 1 ರಿಂದ 2ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಪ್ರಾರಂಭದಲ್ಲಿ 200 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ಶಾಲಾ ಹಾಜರಾತಿ ಪ್ರಮಾಣ ಕ್ಷೀಣಿಸುತ್ತಿದ್ದು, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 7 ವಿದ್ಯಾರ್ಥಿಗಳಿದ್ದಾರೆ.

ಮುಖ್ಯ ಶಿಕ್ಷಕ, ಸಹ ಶಿಕ್ಷಕರೊಬ್ಬರು, ನಿಯೋಜಿತ ಶಿಕ್ಷಕ ಸೇರಿದಂತೆ ಮೂವರು ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಹಂತ, ಹಂತವಾಗಿ ಮಕ್ಕಳ ಹಾಜರಾತಿ ಪ್ರಮಾಣ ಕ್ಷೀಣಿಸುತ್ತಿದ್ದರೂ ತಮ್ಮೂರಿನ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿವರ್ಷವೂ ಶಾಲಾ ವಾರ್ಷಿಕೋತ್ಸವ, ಕ್ರೀಡಾಕೂಟವನ್ನು ಅದ್ದೂರಿಯಾಗಿ ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಊರಿನ ಮಕ್ಕಳನ್ನು ತಮ್ಮೂರಿನ ಸರ್ಕಾರಿ ಶಾಲೆಗೆ ಸೇರಿಸುವಂತೆ ಪಾಲಕರಿಗೂ ಮನವರಿಕೆ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.

ಮೂರು ಎಕರೆ ಜಾಗದಲ್ಲಿ ವಿಶಾಲವಾದ ಆಟದ ಮೈದಾನವನ್ನು ಶಾಲೆ ಹೊಂದಿದೆ. ಶಾಲಾ ಕಟ್ಟಡದ ಹಿಂಭಾಗ ಶಿಥಿಲವಾಗುತ್ತಿದ್ದರೂ ಸರ್ಕಾರ ಮತ್ತು ಶಿಕ್ಷಣ ಇಲಾಖೆ ನಿರ್ಲಕ್ಷೃ ವಹಿಸಿದೆ. 4 ವರ್ಷಗಳ ಹಿಂದೆ ಶಾಲಾ ಕಟ್ಟಡದ ಮೇಲಿನ ಹೆಂಚುಗಳು ಗಾಳಿಗೆ ಹಾರಿ ಹೋಗಿರುವುದರಿಂದ ಮಳೆಗಾಲದಲ್ಲಿ ಶಾಲಾ ಕಟ್ಟಡದ ಹಿಂಭಾಗದ ಗೋಡೆ ಶಿಥಿಲವಾಗುತ್ತಿರುವುದರ ಜತೆಯಲ್ಲಿ ನೀರು ಕೊಠಡಿಯೊಳಗೆ ನುಗ್ಗುತ್ತಿತ್ತು. ಈ ಕುರಿತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ದುರಸ್ತಿಗೊಳಿಸುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ, ಗ್ರಾಮಸ್ಥರು ಮತ್ತು ದಾನಿಗಳು ಸೇರಿಕೊಂಡು ಗಾಳಿಗೆ ಹಾರಿ ಹೋಗಿದ್ದ ಸುಮಾರು 150 ಹೊಸ ಹೆಂಚುಗಳನ್ನು ಖರೀದಿಸಿ ದುರಸ್ತಿಗೊಳಿಸಿದ್ದಾರೆ. ಜತೆಯಲ್ಲಿ ಗ್ರಾಮಸ್ಥರು ಸೇರಿಕೊಂಡು ಶಾಲಾ ಕಟ್ಟಡಕ್ಕೆ ಸಂಬಂಧಪಟ್ಟ ದುರಸ್ತಿ ಕಾರ್ಯವನ್ನು ತಾವೇ ಮಾಡುತ್ತಿದ್ದಾರೆ.

ನಮ್ಮೂರಿನ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಿಸಲು ಪಾಲಕರಿಗೆ ಮನವರಿಕೆ ಮಾಡುತ್ತಿದ್ದೇವೆ. ಶಾಲಾ ಹಿಂಭಾಗ ಶಿಥಿಲಗೊಳ್ಳುತ್ತಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡುತ್ತಿದ್ದೇವೆ. ಗಾಳಿಗೆ ಹೆಂಚುಗಳು ಹಾರಿ ಹೋಗಿದ್ದವು. ಈ ಕುರಿತು ಶಾಲಾ ಅಭಿವೃದ್ದಿ ಸಮಿತಿ, ಗ್ರಾಮಸ್ಥರು ಮತ್ತು ದಾನಿಗಳು ಸೇರಿಕೊಂಡು ಹೊಸ ಹಂಚುಗಳನ್ನು ತಂದು ದುರಸ್ತಿಗೊಳಿಸಿದ್ದೇವೆ ಮತ್ತು ನಮ್ಮೂರಿನ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಸುಂದರ ಅಧ್ಯಕ್ಷ, ಎಸ್‌ಡಿಎಂಸಿ, ಮಾಲಂಬಿ ಸಾವಿರಾರು ಜನರು ವಿದ್ಯಾಭ್ಯಾಸ ಮಾಡಿದ ನಮ್ಮೂರಿನ ಶಾಲೆಯನ್ನು ಉಳಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನದಲ್ಲಿದ್ದೇವೆ. ಶಾಲೆ ಹೆಸರಿನಲ್ಲಿ ಮೂರು ಎಕರೆಯಷ್ಟು ಜಾಗವನ್ನು ಹೊಂದಿದೆ. ಆದರೆ ಶಾಲಾ ಕಟ್ಟಡ ಸೇರಿದಂತೆ ಕೆಲವು ದುರಸ್ತಿ ಕಾರ್ಯವನ್ನು ಸರ್ಕಾರ ಮಾಡಿಕೊಡಬೇಕಿದೆ. ದೇವೇಂದ್ರ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ, ಮಾಲಂಬಿ ಈ ಶಾಲೆಯಲ್ಲಿ 30 ವರ್ಷಗಳ ಹಿಂದೆ 7 ವರ್ಷ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದೆ, ಅಂದಿನ ದಿನಗಳಲ್ಲಿ ಒಂದು ತರಗತಿಯಲ್ಲಿ ಸುಮಾರು 40ರಿಂದ 50 ವಿದ್ಯಾರ್ಥಿಗಳು ಇರುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳು ಇತ್ತೀಚೆಗೆ ಸಿಗುತ್ತಿದೆ, ಹಿಂದೆ ಸೌಲಭ್ಯ ಕಡಿಮೆ ಇದ್ದರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಪಾಲಕರು ಸೇರಿಸುತ್ತಿದ್ದರು. ಇಂದು ಹೆಚ್ಚು ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಇದೆ. ಆದರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತಿದ್ದಾರೆ. ಪಾಲಕರು, ಗ್ರಾಮಸ್ಥರು ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರಯತ್ನಿಸಬೇಕು. ಬಿ.ಜಿ.ಜಯಂತಿ ನಿವೃತ್ತ ಮುಖ್ಯ ಶಿಕ್ಷಕಿ