ಜಿಲ್ಲೆ

ಪಂಚಭೂತಗಳಲ್ಲಿ ಲೀನವಾದ ಹುತಾತ್ಮ ಯೋಧ ದಿವಿನ್

ಸುನಿಲ್ ಪೊನ್ನೇಟಿ

ಶನಿವಾರಸಂತೆ:

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ತೀವ್ರ ಗಾಯಗೊಂಡು ಹುತಾತ್ಮರಾದ ವೀರಯೋಧ ಪಳಂಗೋಟು ಪಿ. ದಿವಿನ್ ಅಂತ್ಯಕ್ರಿಯೆ ಹುಟ್ಟೂರಾದ ಕೊಡಗು ಜಿಲ್ಲೆಯ ಆಲೂರು ಸಿದ್ದಾಪುರದ ಬಳಿಯ ಮಾಲಂಬಿ ಗ್ರಾಮದದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ಸಂಜೆ ನೆರವೇರಿತು.

ಸಾಂಪ್ರದಾಯಿಕ ವಿದಿ-ವಿಧಾನಗಳ ನಂತರ ಮಾಲಂಬಿಯ ಜಮೀನಿನಲ್ಲಿ ಅಗ್ನಿಸ್ಪರ್ಶ ಮಾಡುವುದರೊಂದಿಗೆ ದಿವಿನ್ ಪಂಚಭೂತಗಳಲ್ಲಿ ಲೀನವಾದರು. ಇದಕ್ಕೂ ಮೊದಲು ಮೇಜರ್ ನಿಖಿಲ್ ಮತ್ತು ಸುಬೇದಾರ್ ಮಹೇಶ್ ಜಾಧವ್ ಅವರ ನೇತೃತ್ವದಲ್ಲಿ ಆಗಮಿಸಿದ್ದ ಭಾರತೀಯ ಸೇನಾ ತಂಡ ಹಾಗೂ ಪೊಲೀಸರು ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿದರು.

ಮಾಲಂಬಿಯ ಮನೆಗೆ ಪಾರ್ಥಿವ ಶರೀರವನ್ನು ಕೊಂಡೊಯ್ದ ಸಂದರ್ಭವೂ ಸಾರ್ವಜನಿಕರ ದರ್ಶನಕ್ಕೆ ಕೆಲಕಾಲ ಅವಕಾಶ ಮಾಡಿಕೊಡಲಾಗಿತ್ತು. ಗ್ರಾಮಸ್ಥರು, ಬಂಧು-ಬಳಗದವರು, ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಹುತಾತ್ಮ ಯೋಧ ದಿವಿನ್ ಅವರ ತಾಯಿ ಜಲಜಾಕ್ಷಿ ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ಬಂಧು-ಬಳಗದವರು ಜೋರಾಗಿ ಅಳುತ್ತಾ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು. ಕೊಡಗಿನ ಅರೆಭಾಷಿಕ ಗೌಡ ಪದ್ಧತಿಯ ಸಾಂಪ್ರದಾಯಿಕ ವಿಧಿ-ವಿಧಾನಗಳ ಪ್ರಕಾರ ಹುತಾತ್ಮ ಯೋಧ ದಿವಿನ್ ಕುಟುಂಬದ ಸಂಬAಧಿ ಚಿರಾಗ್ ಅಂತಿಮ ವಿದಿವಿಧಾನ ನೆರವೇರಿಸಿದರು.

ಈ ಸಂದರ್ಭ ಆಲೂರು ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಾಜಿ ಸೈನಿಕರು ಸೇರಿದಂತೆ ಹೆಚ್ಚಿನ ಜನರು ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಹುತಾತ್ಮ ಯೋಧ ದಿವಿನ್‌ಗೆ ಗೌರವ ನಮನ ಸಲ್ಲಿಸಿದರು.

ಮಂಗಳವಾರ ರಾತ್ರಿ ಬೆಂಗಳೂರಿನಿAದ ಪಾರ್ಥಿವ ಶರೀರವನ್ನು ಸೇನಾ ವಾಹನದ ಮೂಲಕ ಕುಶಾಲನಗರಕ್ಕೆ ತರಲಾಗಿತ್ತು. ಬಳಿಕ ದಿವಿನ್ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿ ಕುಶಾಲನಗರದ ಪ್ರಮುಖ ಬೀದಿಯಿಂದ ಮೆರವಣಿಗೆ ಹೊರಟು ಕೂಡಿಗೆ, ಹೆಬ್ಬಾಲೆ ಮಾರ್ಗ ಹುಟ್ಟೂರಾದ ಆಲೂರು ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.